ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರ ಹಾಜರಾತಿ ಕಡ್ಡಾಯವಾಗಿ ಎನ್. ಎಂ.ಎಂ.ಎಸ್ ಆ್ಯಪ್ ಮೂಲಕ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಬಿಎಂಎಸ್‍ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಪಂ ಸಿಇಒ ನೂರ್ ಜಹಾರ್ ಖಾನಂ ಎಚ್ಚರಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಅಂತರ್ಜಲ ಚೇತನ ಕಾರ್ಯಕ್ರಮ ಮತ್ತು ನರೇಗಾ ಬಿಎಂಎಸ್‍ಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಏ.1ರಿಂದ ವರ್ಷ ಪೂರ್ತಿ ನಡೆಯಲಿರುವ ನರೇಗಾ ಕೆಲಸದಡಿ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ಎನ್. ಎಂ.ಎಂ.ಎಸ್ ಆ್ಯಪ್ ಮೂಲಕವೇ ತೆಗೆದುಕೊಳ್ಳಬೇಕು. ಎನ್.ಎಂ.ಆರ್ ವಿತರಿಸಿದ ನಂತರ ಎಷ್ಟು ಜನರು ಕೆಲಸಕ್ಕೆ ಬರುತ್ತಿದ್ದಾರೆ; ಇಲ್ಲ ಎನ್ನುವುದರ ಬಗ್ಗೆ ದಾಖಲಿಸಬೇಕು. ಕೆಲಸಕ್ಕೆ ಗೈರಾದವರ ಹಾಜರಾತಿ ಹಾಕಿದ್ದು ಕಂಡುಬಂದಲ್ಲಿ ಬಿಎಂಎಸ್‍ಗಳನ್ನೇ ನೇರ ಹೊಣೆ ಮಾಡಿ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ ಸುಮಾರು ಒಂದು ಲಕ್ಷ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾಲಾ, ಹಳ್ಳ ಅಭಿವೃದ್ಧಿಪಡಿಸುವ ಕೆಲಸದ ಬಗ್ಗೆ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಅಂರ್ತಜಲ ಚೇತನ ವೃದ್ಧಿಗೆ ಬೇಕಾದ ಅಗತ್ಯ ಕ್ರಮ ಜರುಗಿಸಬೇಕು ಮತ್ತು ನೀರಿನ ಮಹತ್ವ ಅರಿತುಕೊಳ್ಳಬೇಕು ಎಂದರು.
ಆರ್ಟ್ ಆಫ್ ಲೀವಿಂಗ್ ನ್ಯಾಷನಲ್ ಡೈರೆಕ್ಟರ್ ನಾಗರಾಜ ಮಾತನಾಡಿ, ನರೇಗಾ ಯೋಜನೆಯಡಿ ಅಂತರ್ಜಲಮಟ್ಟ ವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ನಾಲಾ, ಹಳ್ಳ ಅಭಿವೃದ್ಧಿ ಪಡಿಸುವ ವೇಳೆ ನೀರು ಶೇಖರಣೆ ಮಾಡುವಂತೆ ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ಮಡೋಳಪ್ಪ ಪಿ.ಎಸ್., ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಜಿಲ್ಲಾ ಸಂಯೋಜನಾಧಿಕಾರಿ ಕೃಷ್ಣ ಸೇರಿ ಇತರರು ಇದ್ದರು.