ಕಲಬುರಗಿ: ಪ್ರವಾಸೋದ್ಯಮ, ಕೈಗಾರಿಕೆ ಉತ್ತೇಜನಕ್ಕಾಗಿ ಶೀಘ್ರದಲ್ಲೇ ಮಂಗಳೂರು – ಕಲಬುರಗಿ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಜೊತೆಗೆ ಚರ್ಚಿಸಿ ಒತ್ತಾಯಿಸಲಾಗುವುದಾಗಿ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ಮಾನಕರ್ ಹೇಳಿದರು.
ಇಲ್ಲಿನ ದಕ್ಷಿಣ ಕನ್ನಡ ಸಂಘದ ವತಿಯಿಂದ ವಿಮಾನ ನಿಲ್ದಾಣ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯರಾದ ನರಸಿಂಹ ಮೆಂಡನ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಾದೇವಪ್ಪ ಕಡೇಚೂರ್ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲಬುರಗಿಯಿಂದ ಕರಾವಳಿ ಭಾಗಕ್ಕೆ ಸಂಚರಿಸಲು ರೈಲು ಸೇವೆ ಕೂಡಾ ಇಲ್ಲದೆ ಇರುವುದರಿಂದ ಪ್ರಯಾಣಿಕರು ಸುಮಾರು 7 ಬಸ್‌ಗಳಲ್ಲಿ ನಿತ್ಯ ಸಂಚಾರ ಮಾಡುತ್ತಿದ್ದಾರೆ. ಈ ಭಾಗದ ಜನರಿಗೆ ಕರಾವಳಿಯ ಶಿಕ್ಷಣ ಸಂಸ್ಥೆ ಆರೋಗ್ಯ, ಪ್ರವಾಸೋದ್ಯಮ ಉದ್ಯಮ ದೃಷ್ಟಿಯಿಂದ ವಿಮಾನ ಸೇವೆ ತುರ್ತಾಗಿ ಆಗಬೇಕಾಗಿದೆ ಎಂದು ಹೇಳಿದ ಅವರು, ಲೋಕಸಭಾ ಸದಸ್ಯರು ಮತ್ತು ವಿಮಾನ ಯಾನ ಖಾತೆಯ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ಶೀಘ್ರ ವಿಮಾನ ಸೇವೆ ಆರಂಭಕ್ಕೆ ಶ್ರಮಿಸುವುದಾಗಿ ಹೇಳಿದರು.
ದಕ್ಷಿಣ ಕನ್ನಡವು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಜಿಲ್ಲೆಯಾಗಿದ್ದು ಅದರ ಸೊಬಗು ಜಗತ್ತಿನೆಲ್ಲೆಡೆ ಪಸರಿಸುವ ಕೆಲಸದಲ್ಲಿ ಅಲ್ಲಿನ ಜನ ನಿರತರಾಗಿರುವುದು ಮಾದರಿಯಾಗಿದೆ ಶ್ಲಾಸಿದರು. ಸನ್ಮಾನ ಸ್ವೀಕರಿಸಿದ ನರಸಿಂಹ ಮೆಂಡನ್ ಮಾತನಾಡಿ, ಬಹುದಿನದ ಬೇಡಿಕೆಯಾದ ಕಲಬುರಗಿ- ಮಂಗಳೂರು ವಿಮಾನ ಸೇವೆ ಆರಂಭಕ್ಕೆ ಸಲಹಾ ಸಮಿತಿಯ ಮೊದಲ ಸಭೆಯಲ್ಲಿ ಚರ್ಚಿಸಿ ಕಲಬುರಗಿ ಮತ್ತು ಮಂಗಳೂರು ಲೋಕಸಭಾಸದಸ್ಯರ ಗಮನಕ್ಕೆ ತರುವುದಾಗಿ ಹೇಳಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನೆರವಾಗುವಂತೆ ವಿಮಾನ ಸೇವೆ ಪ್ರಾರಂಭಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು.
ಸೇವೆಯನ್ನು ಗುರುತಿಸಿ ಗೌರವಿಸಿದ ಸರ್ಕಾರಕ್ಕೆ ಮತ್ತು ಪ್ರೋತ್ಸಾಹಿಸಿ ಸನ್ಮಾನಿಸಿದ ದಕ್ಷಿಣ ಕನ್ನಡ ಸಂಘಕ್ಕೆ ಕೃತಜ್ಞತೆಗಳನ್ನು ಸಲಿಸುವುದಾಗಿ ಮಹಾದೇವಪ್ಪ ಕಡೇಚೂರ್ ಸಹ ಹೇಳಿದರು.
ಸಂಘದ ಗೌರವ ಅಧ್ಯಕ್ಷ ಪ್ರಶಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಂಘದ ಅಧ್ಯಕ್ಷರಾದ ಡಾ| ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೋಶಾಧಿಕಾರಿ ನರಹರಿ ತಂತ್ರಿ ಪ್ರಾರ್ಥನೆ ಗೀತೆ ಹಾಡಿದರು. ಮಹಿಳಾ ಘಟಕದ ಕಾರ್ಯದರ್ಶಿ ಲಕ್ಷೀ ಪ್ರಶಾಂತ ಪೈ ನಿರೂಪಿಸಿದರು. ದಯಾನಂದ ಪೂಜಾರಿ ಚಂದ್ರಶೇಖರ ಶೆಟ್ಟಿ, ರಾಜಶ್ರೀ ಶೆಟ್ಟಿ, ಪ್ರಮಿಳಾ ಎಂ. ಕೆ., ಸುನೀಲ ಶೆಟ್ಟಿ, ಗಣೇಶ ಕೆದಿಲಾಯಿ, ಸಂತೋಷ ಪೂಜಾರಿ, ಶ್ರೀನಿವಾಸ ಆಚಾರ್ಯ, ಎಂ.ಎನ್.ಎಸ್ ಶಾಸ್ತ್ರೀ, ಮಿಲಿತ್ ಹೆಗ್ಡೆ, ಜೀವನ್ ಜತ್ತನ್, ಪ್ರದೀಪ ಶೆಟ್ಟಿ, ಜಹೀರ ಅಹ್ಮದ, ಮನೋಜ್ ಪೂಜಾರಿ, ಪ್ರವೀಣ ಶೆಟ್ಟಿ, ಚಂದ್ರಶೇಖರ ಮತ್ತಿತ್ತರಿದ್ದರು.