ಸಿಂದಗಿ: ಪಟ್ಟಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಹೇಳಿದರು.
ಅಮೃತ ನಿರ್ಮಲ್ ನಗರ ಯೋಜನೆಯಡಿ ಬಸವೇಶ್ವರ ವೃತ್ತದ ಬಳಿ, ಪುರಸಭೆ ಕಾರ್ಯಾಲಯದ ಮುಂದುಗಡೆ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ವಿವೇಕಾನಂದ ವೃತ್ತದಿಂದ ಬಸವೇಶ್ವರ ವೃತ್ತ ಡಿವೈಡರ್‌ಗಳಲ್ಲಿ ಸಸಿ ನೆಡುವುದು ಹಾಗೂ ಗ್ರೀಲ್ ಅಳವಡಿಸುವುದು, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಂಪೌಂಡ್ ನಿರ್ಮಿಸುವದು, ಘನತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ಬೋರ್‌ವೆಲ್ ಕೊರೆದು ವಿದ್ಯುತ್ ಮೊಟಾರ್ ಅಳವಡಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಸೌಂದರ್ಯ ಗಮನದಲ್ಲಿಟ್ಟುಕೊಂಡು ಅಮೃತ ನಿರ್ಮಲ್ ಯೋಜನೆಯಡಿ ಒಂದು ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲಾಗಿದೆ. ಲಭ್ಯವಿರುವ ಕೆಲವೆ ಕೆಲವು ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಗರದ ಸೌಂದರ್ಯೀಕರಣ ಹಾಗೂ ಸ್ವಚ್ಛತೆಗೆ ಆದ್ಯತೆ ಕೊಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರ ಸಿಂದಗಿ ಪುರಸಭೆಯ ಎಸ್‌ಎಫ್‌ಸಿ ಹಾಗೂ ಇತರೆ ಅನುದಾನವನ್ನು ಗಣನೀಯವಾಗಿ ಕಡಿಮೆ ಮಾಡಿದ್ದು ವಿಷಾಾದನೀಯ, ಬಂದಿರುವ ಅನುದಾನ ಆನೆ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎಂಬಂತಾಗಿದೆ. ಹೆಚ್ಚಿನ ವಿಶೇಷ ಅನುದಾನಕ್ಕೆ ಶಾಸಕರು ಹಾಗೂ ಸಂಬಂಧಿಸಿದ ಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಗುವದು ಎಂದರು.
ಅಮೃತ ನಿರ್ಮಲ್ ಯೋಜನೆಯಡಿ ಬಸವೇಶ್ವರ ವೃತ್ತದ ಬಳಿ ಹಾಗೂ ಕಾಗಿ ದವಾಖಾನೆ ಹತ್ತಿರ ಹೈಟೆಕ್ ಶೌಚಾಲಯ, ವಿವೇಕಾನಂದ ವೃತ್ತದಿಂದ ಬಸವೇಶ್ವರ ವೃತ್ತ ದವರೆಗೆ ಡಿವೈಡರ್‌ಗಳಿಗೆ ಗ್ರಿಲ್ ಅಳವಡಿಸುವದು. ಸಸಿ ನೆಡುವದು, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಕಾಂಪೌಂಡ್ ನಿರ್ಮಿಸುವುದು ಮುಂತಾದ ಅಭಿವೃದ್ಧಿ ಜೊತೆಗೆ ನಗರಕ್ಕೆ ಅವಶ್ಯಕವಿರುವ, ಯಂತ್ರೋಪಕರಣಗಳನ್ನು ಖರೀದಿಸಲಾಗುವದು ಎಂದು ತಿಳಿಸಿದರು.
ಪುರಸಭೆ ಸದಸ್ಯೆ ಪ್ರತಿಭಾ ಕಲ್ಲೂರ, ಭೀಮು ಕಲಾಲ್, ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಪ್ರವೀಣ ಕಂಟಿಗೊಂಡ, ಸಿದ್ದಣ್ಣ ಹದನೂರ, ರಾಜಶೇಖರ ಕೂಚಬಾಳ, ಅಭಿಯಂತರ ಅಜರುದ್ದಿನ್ ನಾಟೀಕಾರ, ಅಭಿಯಂತರ ನಿಂಗರಾಜ ಗುಡಿಮನಿ, ಶಿವು ಬಡಿಗೇರ, ಮಹಮದ್ ಪಟೇಲ್, ಯಮನೇಶ ಮ್ಯಾಗೇರಿ, ಪುರಸಭೆ ಅಧಿಕಾರಿಗಳು ಇದ್ದರು.