ಬೀದರ: ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ನೇಮಕ ಮಾಡುವ ಮೂಲಕ ಅಧಿಕಾರ ವಿಕೇಂದ್ರೀಕರಣ ಮತ್ತು ಆಡಳಿತ ಸುಧಾರಣೆಗೆ ಪ್ರಯತ್ನಿಸುವುದು ಸೇರಿದಂತೆ ಕಲಾವಿದರ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸುವುದಾಗಿ ಇಲಾಖೆ ಸಚಿವ ಸುನೀಲ್ ಕುಮಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಒಕ್ಕೂಟದ ಗೌರವಾಧ್ಯಕ್ಷೆ ಮಂಜಮ್ಮ ಜೋಗತಿ ಮತ್ತು ಅಧ್ಯಕ್ಷ ವಿಜಯಕುಮಾರ ಸೋನಾರೆ ನೇತೃತ್ವದ ಪ್ರಮುಖರ ನಿಯೋಗ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರದ ಬೇಡಿಕೆಗೆ ಈಡೇರಿಕೆಗೆ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸುವುದು, ಕ.ಕ ಭಾಗದ ಪ್ರಸಿದ್ಧ ತತ್ವಪದಕಾರ ಕಡಕೋಳ ಮಡಿವಾಳಪ್ಪ ಅವರ ಕ್ಷೇತ್ರ ಅಭಿವೃದ್ಧಿಪಡಿಸಬೇಕು. ಸರ್ಕಾರದಿಂದ ನಡೆಯುವ ಎಲ್ಲ ಉತ್ಸವ, ರಾಜ್ಯ-ರಾಷ್ಟ್ರ ಮಟ್ಟದ ಸಮಾರಂಭಗಳಲ್ಲಿ ಕಡ್ಡಾಯವಾಗಿ ಈ ಪ್ರದೇಶದ ಕಲಾವಿದರಿಗೆ ಅವಕಾಶ ನೀಡಬೇಕು. ಕ.ಕ ಭಾಗದ ಸಾಧಕರು ಮತ್ತು ಕಲಾವಿದರ ಹೆಸರಿನಲ್ಲಿ ಸರ್ಕಾರದಿಂದ ಟ್ರಸ್ಟ್ – ಪ್ರತಿಷ್ಠಾನ ಸ್ಥಾಪಿಸಬೇಕು. ನಾಲ್ಕು ಉಪ ವಿಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯ ಆರಂಭಿಸಬೇಕು. ರಾಜ್ಯದಲ್ಲಿ ಎಲ್ಲ ಪ್ರಕಾರದ ಕಲಾವಿದರಿಗೂ ಇಲಾಖೆ ಮೂಲಕ ಕಲಾವಿದರಿಗೆ ಗುರುತಿನ ನೀಡಬೇಕೆಂದು ಆಗ್ರಹಿಸಲಾಗಿದೆ.
ತೆಲಂಗಾಣ ಸರ್ಕಾರದಂತೆ ರಾಜ್ಯದ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪುರಸ್ಕೃತ ಕಲಾವಿದರಿಗೆ ನಿರಂತರ 10 ಸಾವಿರ ರೂ. ಮಾಸಾಶನ, ರಾಜ್ಯದ ಕಲಾವಿದರ ಮಾಸಾಶನ ಮೊತ್ತ 5 ಸಾವಿರಕ್ಕೆ ಹೆಚ್ಚಿಸಿ ವಯೋಮಾನ 58 ರಿಂದ 50ಕ್ಕೆ ಇಳಿಸಬೇಕು, ಎಲ್ಲ ಶಾಲೆಗಳಲ್ಲಿ ರಂಗ ಶಿಕ್ಷಕರು ಮತ್ತು ಸಂಗೀತ ಶಿಕ್ಷಕರನ್ನು ನೇಮಿಸಬೇಕು, ಎಲ್ಲ ವಸತಿ ಶಾಲೆಗಳಲ್ಲಿ ಜನಪದ ಶಿಕ್ಷಕರನ್ನು ನೇಮಿಸಬೇಕು, ಕಲಾವಿದರಿಗಾಗಿಯೇ ಪ್ರತ್ಯೇಕವಾಗಿ ವಿಧಾನ ಪರಿಷತ್ ಕ್ಷೇತ್ರ ರಚಿಸುವುದು ಸೇರಿದಂತೆ ಇತರ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಲಾಗಿದೆ. ಈ ವೇಳೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಉಪಾಧ್ಯಕ್ಷ ಡಿಂಗ್ರಿ ನರೇಶ, ಕೋಶಾಧ್ಯಕ್ಷ ಎಸ್.ಬಿ. ಹರಿಕೃಷ್ಣ, ಸಹ ಕಾರ್ಯದರ್ಶಿ, ಅಮರೇಶ ಹುಸ್ಮಕಲ್, ಸದಸ್ಯ ಸುನೀಲ ಕಡ್ಡೆ, ಜಿಲ್ಲಾ ಸಂಚಾಲಕರಾದ ಲಕ್ಷ್ಮಣ ಫೀರಗಾರ, ಶಾಂತಲಿಂಗಯ್ಯ ಮಠಪತಿ, ದೇವರಾಜ ಜಂದಗೀರಿ ಇತರರಿದ್ದರು.