Advertisement

ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಯತ್ನ

12:22 PM Jan 27, 2018 | Team Udayavani |

ಬೀದರ: ರಾಜ್ಯವನ್ನು ಹಸಿವು ಮುಕ್ತವಾಗಿಸುವ ನಿಟ್ಟಿನಲ್ಲಿ ಸರ್ಕಾರ ಯತ್ನಿಸುತ್ತಿದ್ದು, ಬಡವರು, ಶ್ರಮಿಕರು ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟ ದೊರೆಯುವಂತಾಗಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಫೆಬ್ರವರಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಜಿಲ್ಲಾಡಳಿತದ ವತಿಯಿಂದ ನಗರದ ಮಂಗಲಪೇಟ್‌ನ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನುಡಿದಂತೆ ನಡೆಯುತ್ತಿರುವ ಸರ್ಕಾರ 13 ಲಕ್ಷ ಮನೆಗಳನ್ನು ಈಗಾಗಲೇ ನಿರ್ಮಿಸಿಕೊಟ್ಟಿದೆ. ಘೋಷಣೆ ಮಾಡಿದ ಎಲ್ಲಾ ಕಾರ್ಯಕ್ರಮಗಳು ನಿಗದಿಪಡಿಸಿದ ಅವ ಧಿಯಂತೆ ನಡೆಯುತ್ತಿವೆ ಎಂದು ತಿಳಿಸಿದರು.

ತಾವು ಸಚಿವರಾದ ಬಳಿಕ ಪೌರಾಡಳಿತ ಇಲಾಖೆಗೆ ದಾಖಲೆಯ 400 ಕೋಟಿ ಅನುದಾನ ತರಲಾಗಿದೆ. ಕುಡಿಯುವ ನೀರು, ಬೀದಿ ದೀಪ, ಗಟಾರ್‌ ನಿರ್ಮಾಣ, ಘನ ತ್ಯಾಜ್ಯ ಹಾಗೂ ಮಲತ್ಯಾಜ್ಯ ವಿಲೇವಾರಿಗೆ ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. 

ಹತ್ತು ಹಲವಾರು ಬದಲಾವಣೆಗಳನ್ನು ಪೌರಾಡಳಿತ ಇಲಾಖೆಯಲ್ಲಿ ತರಲಾಗಿದೆ. ಈ ಬಾರಿ ಹಳ್ಳಿಖೇಡ(ಬಿ)ವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಹುದ್ದೆಗಳ ಕಾಯಂಗೊಳಿಸಲಾಗುತ್ತಿದೆ. ಅವರಿಗೆ ವಸತಿ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ
ನೀಡಲಾಗುತ್ತಿದೆ ಎಂದರು. 

ವಿಸ್ತೃತ ಯೋಜನೆಯೊಂದನ್ನು ತಯಾರಿಸಿ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಒತ್ತು ಕೊಡಲಾಗುವುದು. ತಾಯಿ-ಮಗು ಆಸ್ಪತ್ರೆ ನಿರ್ಮಾಣ ಕಾರ್ಯ ನಡೆದಿದೆ. ಇಂಜಿನಿಯರಿಂಗ್‌ ಕಾಲೇಜಿಗೆ ಟೆಂಡರ್‌ ಆಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು. ಶಾಲೆ, ವಸತಿ ಶಾಲೆ, ರಸ್ತೆ, ಸೇತುವೆ, ಕೆರೆ ನಿರ್ಮಾಣ, ತೋಟಗಾರಿಕೆ, ಪಶುಪಾಲನೆ, ಕೃಷಿ, ನೀರಾವರಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ಎಲ್ಲಾ ವಲಯಗಳ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಬೀದರ ಜಿಲ್ಲೆಗೆ ದಾಖಲೆ ಪ್ರಮಾಣದಲ್ಲಿ ಅನುದಾನ ಬಂದಿದೆ ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ, ಕೆರೆ ದುರಸ್ಥಿಗಾಗಿ ಸಾವಿರಾರು ಕೋಟಿ ರೂ.ಗಳ ಅನುದಾನ ತರಲಾಗಿದೆ. ಎಚ್‌ಕೆಡಿಬಿಯಿಂದ 500 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ಹಿಂದೆ ಯಾವ ಸರ್ಕಾರಗಳೂ ನೀಡದಷ್ಟು ಅನುದಾನ ನಾಲ್ಕುವರೆ ವರ್ಷದಲ್ಲಿ ಬಂದಿದೆ. ಹೆದ್ದಾರಿ ಮಾದರಿಯಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿವೆ. ಹಟ್ಟಿ ಮತ್ತು ತಾಂಡಗಳಲ್ಲಿಯೂ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿವೆ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ರಹೀಮ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ಶಾಸಕರಾದ ವಿಜಯಸಿಂಗ್‌, ರಘುನಾಥರಾವ ಮಲ್ಕಾಪೂರೆ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಬುಡಾ ಅಧ್ಯಕ್ಷ ಸಂಜಯ ಜಾಗೀರದಾರ, ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ಸಿಇಒ ಡಾ| ಆರ್‌.ಸೆಲ್ವಮಣಿ, ಎಸ್‌ಪಿ ಡಿ.ದೇವರಾಜ, ಅಪರ ಜಿಲ್ಲಾ ಧಿಕಾರಿ ಡಾ| ಡಿ.ಷಣ್ಮುಖ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ ಮತ್ತಿತರರು ವೇದಿಕೆಯಲ್ಲಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ ಮಹನಿಯರನ್ನು ಸಚಿವರು ಸನ್ಮಾನಿಸಿದರು. ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

Advertisement

Udayavani is now on Telegram. Click here to join our channel and stay updated with the latest news.

Next