Advertisement

ಚೌಡಯ್ಯ ನಿಗಮಕ್ಕೆ ಶತಕೋಟಿ ಮೀಸಲಿಗೆ ಯತ್ನ

10:17 AM Jan 22, 2018 | |

ಕ‌ಲಬುರಗಿ: ರಾಜ್ಯ ಸರ್ಕಾರದ ಮುಂಬರುವ ಬಜೆಟ್‌ ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ ಕನಿಷ್ಠ 100 ಕೋಟಿ ರೂ. ಅನುದಾನ ಮೀಸಲಿರಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋಲಿ
ಸಮಾಜದ ಅಭಿವೃದ್ಧಿಗೆ ಸರ್ಕಾರ ಸ್ಥಾಪಿಸಿರುವ ನಿಗಮಕ್ಕೆ ಈ ಬಾರಿ ಹೆಚ್ಚಿನ ಅನುದಾನ ನೀಡುವ ಭರವಸೆ ಇದೆ ಎಂದರು.

ಕಳೆದ ವರ್ಷದ ಜಯಂತ್ಯುತ್ಸವದಲ್ಲಿ ಕೇಳಲಾದ ಎರಡೂ ಬೇಡಿಕೆಗಳನ್ನು ಈಡೇರಿಸಲಾಗಿದೆ. ಒಂದನೇಯದ್ದು ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪಕ್ಕೆ ಸರ್ಕಾರದಿಂದ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಎರಡನೇಯದ್ದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಈ ನಿಗಮಕ್ಕೆ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಅಧ್ಯಕ್ಷರನ್ನಾಗಿಸಲು ಪ್ರಯತ್ನಿಸಲಾಗಿತ್ತು. ಆದರೆ ಸಮಾಜದ ಕೆಲವು ತೊಂದರೆಗಳಿಂದ ಸಾಧ್ಯವಾಗಿಲ್ಲ. ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೆಸರು ಸೂಚಿಸಿದಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು
ಹೇಳಿದರು. 

ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಮದೇವ ಕಡಕೋಳ ಉಪನ್ಯಾಸ ನೀಡಿ, ಶೋಷಣೆ ಮುಕ್ತ ಸಮಾಜ ನಿರ್ಮಿಸಲು, ಮೂಢ ನಂಬಿಕೆ ಗೊಡ್ಡು ಸಂಪ್ರದಾಯಕ್ಕೆ ಕಡಿವಾಣ ಹಾಕಲು ಅಂಬಿಗರ ಚೌಡಯ್ಯ ಹೋರಾಡಿದ್ದಾರೆ. ಅವರ 279 ಜನಪದ ವಚನಗಳು ಪ್ರಸ್ತುತದಲ್ಲಿವೆ ಎಂದರು. 

Advertisement

ತೊನಸನಹಳ್ಳಿ ಎಸ್‌. ಅಲ್ಲಮಪ್ರಭು ಪೀಠಾಧಿಪತಿ ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮೀಜಿ, ಶ್ರೀಶೈಲ ಸಾರಂಗಮಠದ ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಿ.ಪಂ.ಅಧ್ಯಕ್ಷೆ ಸುವರ್ಣಾ ಹಣಮಂತರಾವ್‌ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರರಸಗಿ, ಶಾಸಕರಾದ ಬಿ.ಆರ್‌. ಪಾಟೀಲ, ಬಿ.ಜಿ. ಪಾಟೀಲ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಪಾಲಿಕೆ ಮೇಯರ್‌ ಶರಣಕುಮಾರ ಮೋದಿ, ರಾಜ್ಯ ಕೂಲಿ (ಗಂಗಾಮತ) ಸಮಾಜದ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಗಣ್ಯರಾದ ಬಸವರಾಜ ದಿಗ್ಗಾವಿ, ಡಾ| ಇಂದಿರಾ ಶಕ್ತಿ, ಅಲ್ಲಮಪ್ರಭು
ಪಾಟೀಲ, ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ ಹಾಗೂ ಮತ್ತಿತರ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನ ಭಾವಚಿತ್ರದ ಭವ್ಯ ಮೆರವಣಿಗೆ ನಗರ ನೆಹರು ಗಂಜ್‌ನಲ್ಲಿರುವ ನಗರೇಶ್ವರ ಬಾಲವಿಕಾಸ ಮಂದಿರದಿಂದ ಆರಂಭವಾಗಿ ಸೂಪರ್‌ ಮಾರ್ಕೆಟ್‌ ಮಾರ್ಗವಾಗಿ ಜಗತ್‌ ವೃತ್ತದ ಮೂಲಕ ಡಾ| ಎಸ್‌. ಎಂ. ಪಂಡಿತ ರಂಗಮಂದಿರದಲ್ಲಿ ಕೊನೆಗೊಂಡಿತು.

ಮತಕ್ಕಾಗಿ ಕೆಲಸ ಮಾಡುವವರಲ್ಲ ನಾವು. ಸಾಮಾಜಿಕವಾಗಿ ಎಲ್ಲ ವರ್ಗಗಳಿಗೆ ನ್ಯಾಯ ಕಲ್ಪಿಸುವುದೇ ಸರ್ಕಾರದ ಹಾಗೂ ತಮ್ಮ ಧ್ಯೇಯವಾಗಿದೆ. ಸ್ವಾರ್ಥವಿಲ್ಲದೇ ನಿಸ್ವಾರ್ಥದಿಂದ ಸೇವೆ ಸಲ್ಲಿಸುವವರನ್ನು ಗುರುತಿಸಿ ಮತ ನೀಡಿ. ಆಚಾರ-ವಿಚಾರ, ನಡೆ-ನುಡಿಯಲ್ಲಿ ಒಂದಾದಲ್ಲಿ ಅಭಿವೃದ್ಧಿಗೆ ಪೂರಕ. ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು.
 ಡಾ| ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ಇಂದಿನ ಸಮಾರಂಭಕ್ಕೆ ಸಂಸದ, ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಬಾರದೇ ಗೈರು ಹಾಜರಾಗಿರುವುದು ಬೇಸರ ತಂದಿದೆ. ಕೋಲಿ ಸಮಾಜದ ಒಳಿತಿಗೆ ಹಗಲಿರಳು ಶ್ರಮಿಸುತ್ತಿದ್ದ ಹೋರಾಟದ ರಥವನ್ನು ನಾನು ಮುಂದುವರಿಸುತ್ತೇನೆ. ಪ್ರಮುಖವಾಗಿ ಸಮಾಜ ಎಸ್ಟಿಗೆ ಸೇರಿಸುವುದು, ನಗರದಲ್ಲಿ ಅಂಬಿಗರ ಚೌಡಯ್ಯ ಪುತ್ಥಳಿ ಹಾಗೂ ವಿಠ್ಠಲ ಹೆರೂರ ಮೂರ್ತಿ ಪ್ರತಿಷ್ಠಾಪನೆಗೆ ಶ್ರಮಿಸಲಾಗುವುದು. 
 ತಿಪ್ಪಣ್ಣಪ್ಪ ಕಮಕನೂರ, ಗೌರವಾಧ್ಯಕ್ಷ, ರಾಜ್ಯ ಕೋಲಿ ಸಮಾಜ

ಕೋಲಿ ಸಮಾಜದ ನಾಯಕರನ್ನು ಗುರುತಿಸಿ ರಾಷ್ಟ್ರದ ಪ್ರಥಮ ಹುದ್ದೆಗೆ ನೇಮಕಗೊಂಡಿರುವುದು ಎಲ್ಲರಿಗೂ
ತಿಳಿದ ವಿಷಯ. ಅದೇ ರೀತಿ ಕಲಬುರಗಿ ಮಹಾನಗರದಲ್ಲಿ ತಮ್ಮ ತಂದೆಯವರು ಶಾಸಕರು ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಮಾಜದ ಸಮುದಾಯ ಭವನಕ್ಕಾಗಿ ಒಂದು ಎಕರೆ ಭೂಮಿ ಹಾಗೂ 2 ಕೋಟಿ ರೂ. ನೀಡಲಾಗಿದೆ. ಮಾತಾ ಮಾಣಿಕೇಶ್ವರಿ ಮಂದಿರಕ್ಕೆ 10 ಲಕ್ಷ ರೂ. ನೀಡಲಾಗಿದೆ. ದೇವಾಲಯದ ಮುಂದಿನ ಅಭಿವೃದ್ಧಿಗೆ ಇನ್ನು ಆರ್ಥಿಕ ಸೌಲಭ್ಯ ಕಲ್ಪಿಸಲು ಬದ್ಧವಿದ್ದೇನೆ.
 ದತ್ತಾತ್ರೇಯ ಪಾಟೀಲ ರೇವೂರ, ಶಾಸಕರು

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಕೋಲಿ ಸಮಾಜಕ್ಕೆ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ
ಸಮಾಜದ ಬೆಂಬಲ ಯಾರಿಗೆ ಎಂಬುದರ ಕುರಿತಾಗಿ ಚಿಂತನೆ ನಡೆಸಬೇಕಾಗುತ್ತದೆ. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಿಕ್ಕಾಗದಿರುವುದು ಸಮಾಜಕ್ಕೆ ಆಗುತ್ತಿರುವ ಅನ್ಯಾಯಗಳಲ್ಲೊಂದು.
 ತಿಪ್ಪಣ್ಣ ರೆಡ್ಡಿ, ಕೋಲಿ ಸಮಾಜದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next