Advertisement

Muddebihal: ಗಾಂಧಿ ಜಯಂತಿಯಂದು ಪೊಲೀಸರಿಂದ ಮಾದರಿ ಕಾರ್ಯ

01:10 PM Oct 02, 2024 | Kavyashree |

ಮುದ್ದೇಬಿಹಾಳ: ಪೊಲೀಸರೆಂದರೆ ಕ್ರಿಮಿನಲ್ ಗಳ ಬೆನ್ನು ಹತ್ತುವವರು, ಅಪರಾಧ ತಡೆಯಲು ಶ್ರಮಿಸುವವರು ಅನ್ನೋ ಭಾವ ಜನರಲ್ಲಿದೆ. ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸರು ಗಾಂಧಿ ಜಯಂತಿಯಂದು ಸಾರ್ಥಕ ಕೆಲಸ ಮಾಡುವ ಮೂಲಕ ಗಾಂಧಿ ತತ್ವಗಳಾದ ಶ್ರಮದಾನ, ಸ್ವಚ್ಛತೆಯನ್ನು ಪಾಲಿಸಿ, ಜನತೆಗೆ, ಸಂಘ ಸಂಸ್ಥೆಯವರಿಗೆ ಮಾದರಿಯ ಸಂದೇಶ ನೀಡಿದ್ದಾರೆ.

Advertisement

ಮುದ್ದೇಬಿಹಾಳ ನಗರದ ಅಂಬೇಡ್ಕರ್ ವೃತ್ತ ಜನನಿಬಿಡ ಮಾತ್ರವಲ್ಲದೆ ಹೆಚ್ಚು ವಾಹನ ಸಂಚಾರವಿರುವ ಅತ್ಯಂತ ಕಿರಿದಾದ ಸರ್ಕಲ್. ಸಮೀಪದಲ್ಲೇ ಶಾಲೆ, ಕಾಲೇಜುಗಳಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಓಡಾಟ ಇರುತ್ತದೆ. ಸಾರ್ವಜನಿಕರು ಬಸ್ಸಿಗಾಗಿ ಇದೇ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಾರೆ. ಇದರಿಂದಾಗಿ ಸಹಜವಾಗಿ ಇಲ್ಲಿ ಅಪಘಾತಳ ಸಂಖ್ಯೆಯೂ ಹೆಚ್ಚು. ಇದನ್ನು ಮನಗಂಡ ಪುರಸಭೆ ಆಡಳಿತ ಈಚೆಗೆ ಸರ್ಕಲ್ ಸುತ್ತಲಿನ ಅತಿಕ್ರಮಣ ತೆರವುಗೊಳಿಸಿತ್ತು. ಮತ್ತೆ ಅತಿಕ್ರಮಣ ಆಗದಂತೆ ತಡೆಯಲು ಪೊಲೀಸರು ಅಲ್ಲಿ ಬಸ್ ಶೆಲ್ಟರ್ ಮಾಡುವ ಯೋಜನೆ ಜಾರಿಗೊಳಿಸಿದರು.

ಶ್ರಮದಾನ, ಸ್ವಚ್ಛತೆ: ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ, ಎಎಸೈ, ಮುಖ್ಯಪೇದೆ, ಮಹಿಳಾ ಪೇದೆ ಸೇರಿ ಹಲವು ಪೊಲೀಸರು ಶ್ವೇತ ವರ್ಣದ ಟೀಶರ್ಟ್, ಕಪ್ಪು ಪ್ಯಾಂಟ್ ಸಮವಸ್ತ್ರಧಾರಿಗಳಾಗಿ ಸರ್ಕಲನ ಎಪಿಎಂಸಿ ಕಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಸ್ಥಳ ಸ್ವಚ್ಛಗೊಳಿಸಿದರು. ಸಲಿಕೆ ಹಿಡಿದು ಗರಸು ಮಣ್ಣು ಹಾಕಿ ಸಮತಟ್ಟುಗೊಳಿಸಿದರು. ಸಾರ್ವಜನಿಕರಿಗೆ ಕುಳುತುಕೊಳ್ಳಲು ಸಂಚಾರ ನಿಯಮ ಬರೆದ ಸಿಮೆಂಟ್ ಕಾಂಕ್ರಿಟ್ ಆಸನಗಳನ್ನು ಅಳವಡಿಸಿದರು. ಒಟ್ಟಾರೆ ಅಂದಾಜು 3-4 ಗಂಟೆಗಳ ಕಾಲ ಶ್ರಮದಾನ ಮಾಡಿ ಮಾದರಿಯ ಸಂದೇಶ ನೀಡಿದರು.

ಪುರಸಭೆ ಸಹಕಾರ: ಪುರಸಭೆ ಆಡಳಿತದ ಕಾರ್ಯದಲ್ಲಿ ಕೈಜೋಡಿಸಲು ಜೆಸಿಬಿ ನೀಡಿ, ಕೆಲ ಪೌರಕಾರ್ಮಿಕರನ್ನು ಒದಗಿಸಿ ಸಹಕರಿಸಿದರು.

Advertisement

ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪುರಸಭೆಯವರು ಮಾಡಬೇಕಿದ್ದ ಕಾರ್ಯವನ್ನು ಪೊಲೀಸರು ಮಾಡಿದ್ದಕ್ಕೆ ಅಭಿನಂದಿಸಿ ಶಾಸಕರ ಅನುದಾನದಲ್ಲಿ ಬಸ್ ಸೇಲ್ಟರ್ ನಿರ್ಮಿಸುವ ವಾಗ್ದಾನ ಮಾಡಿದರು.

ಮುಖಂಡರು ಪಾಲು: ಪೊಲೀಸರೊಂದಿಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಮಾಜ ಸೇವಕರು ಕೈಜೋಡಿಸಿ ಶ್ರಮದಾನದಲ್ಲಿ ಭಾಗವಹಿಸಿ ಪೊಲೀಸರಿಗೆ ಸಾಥ್ ನೀಡಿದರು.

ಸಿಪಿಐ ಹೇಳಿಕೆ: ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಮಾತನಾಡಿ, ಈ ಸರ್ಕಲ್ ಅಪಘಾತದ ಸ್ಥಳವಾಗಿತ್ತು. ಸಂಚಾರಕ್ಕೆ ಸಮಸ್ಯೆ ಮಾಡಿದ್ದನ್ನು ಕಿತ್ತುಹಾಕಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಸ್ವಚ್ಚಗೊಳಿಸಿ ನಮ್ಮ ಪೊಲೀಸರು ಶ್ರಮದಾನದ ಮೂಲಕ ಸಾರ್ವಜನಿಕರ ವಿಶ್ರಾಂತಿ ತಾಣವಾಗಿ ಮಾಡಿದರು. ಇಲ್ಲಿ ಬಸ್ ಶೆಲ್ಟರ್ ನಿರ್ಮಾಣವಾಗಬೇಕು. ಗಾಂಧಿ ಜಯಂತಿಯಂದು ಗಾಂಧೀಜಿಯವರ ಸಂದೇಶ ಪಾಲಿಸಿದ್ದೇವೆ. ಪೊಲೀಸರು ಕೂಡಾ ಸಮಾಜಮುಖಿ ಕೆಲಸ ಮಾಡುತ್ತಾರೆ ಅನ್ನೋದನ್ನು ಮಾಡಿ ತೋರಿಸಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next