ಚಿಕ್ಕಬಳ್ಳಾಪುರ: ಈವರೆಗೆ ನಾನು ಎಲ್ಲೂ ನೋಡಿರದ ಬೃಹತ್ ಆರೋಗ್ಯ ಮೇಳವಿದು. ಇಂತಹ ಯೋಜಿತ ಕಾರ್ಯಕ್ರಮ ಸಚಿವ ಡಾ.ಕೆ.ಸುಧಾಕರ್ ಅವರ ದೂರದೃಷ್ಟಿಗೆ ಸಾಕ್ಷಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಬೃಹತ್ ಆರೋಗ್ಯ ಮೇಳಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.
ಆರೋಗ್ಯ ಮೇಳದಲ್ಲಿ ತಪಾಸಣೆ ಜತೆಗೆ ಚಿಕಿತ್ಸೆಯೂ ಲಭ್ಯವಿದೆ. ಒಂದೇ ಕ್ಯಾಂಪಸ್‌ನಲ್ಲಿ ತಪಾಸಣೆ, ಚಿಕಿತ್ಸೆ, ಆಯುಷ್ಮಾನ್ ಕಾರ್ಡ್ ಮಾಡಿಕೊಡುವುದು ಸೇರಿ ಹಲವಾರು ಸೇವೆಗಳನ್ನು ನೀಡಲಾಗುತ್ತಿದೆ. ಇಂತಹ ಉತ್ತಮ ಕಾರ್ಯವನ್ನು ಬೇರೆ ಪಕ್ಷದವರು ನೋಡಿ ಕಲಿಯಬೇಕಿದೆ. ಇದೇ ರೀತಿ ಇನ್ನಷ್ಟು ಜಿಲ್ಲೆಗಳಲ್ಲಿ ಈ ಆರೋಗ್ಯ ಮೇಳ ನಡೆಯಲಿ ಎಂದು ಸಲಹೆ ನೀಡಿದರು.
ಸಿಎಂ ಜತೆ ಚರ್ಚಿಸಿ ಜಿಲ್ಲೆಗಳಲ್ಲೂ ಮೇಳ:
Related Articles
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಶನಿವಾರ, ಭಾನುವಾರದ ರಜಾದಿನಗಳನ್ನು ಆರಿಸಿ ಕೊಂಡು ಆರೋಗ್ಯ ಮೇಳ ಮಾಡಲಾಗಿದೆ. ಜನರು ಹೆಚ್ಚು ಉತ್ಸಾಹದಿಂದ ಮೇಳಕ್ಕೆ ಬಂದು ಸೇವೆ ಪಡೆದಿದ್ದಾರೆ. ವೈದ್ಯರು, ಕಾರ್ಯಕರ್ತರು ಸಮಯ ಮೀರಿದ್ದರೂ ಕೆಲಸ ಮಾಡಿದ್ದಾರೆ. ಅವರಿಗೆ ವಂದನೆಗಳನ್ನು ತಿಳಿಸುತ್ತೇನೆ. ರಾಜ್ಯ ಸರ್ಕಾರದಿಂದಲೇ ಈ ರೀತಿಯ ಆರೋಗ್ಯ ಮೇಳವನ್ನು ಪ್ರತಿ ಜಿಲ್ಲೆಯಲ್ಲಿ ನಡೆಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಇದನ್ನು ಜನಾಂದೋಲನದಂತೆ ಮಾಡಲಾಗುವುದು ಎಂದರು.
ಗ್ರಾಮೀಣ ಭಾಗಗಳಲ್ಲಿ ಆರೋಗ್ಯದ ಬಗ್ಗೆ ಹಂತದ ಆಸ್ಪತ್ರೆಗಳು ಎಲ್ಲಾ ಕಡೆ ಇಲ್ಲ. ಚಿಕ್ಕಬಳ್ಳಾಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಬರಲು 10-12 ತಿಂಗಳು ಬೇಕಾಗಬಹುದು. ಈ ಭಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ನನ್ನದೇ ರೀತಿಯಲ್ಲಿ ಹೋರಾಟ ಮಾಡಿದ್ದೇನೆ. ಈವರೆಗೆ ಜನರು ಬೆಂಗಳೂರಿನಂತಹ ನಗರಗಳಿಗೆ ಹೋಗಿ ತಪಾಸಣೆ, ಚಿಕಿತ್ಸೆ ಪಡೆಯುತ್ತಿದ್ದರು ಎಂದರು.
ಟೀಕೆಗಳು ಸಹಜ: ಆರೋಗ್ಯ ಮೇಳದ ಟೀಕೆ ಕುರಿತು ಉತ್ತರಿಸಿದ ಸಚಿವರು, ನೀರು ತರುವಾಗ, ವೈದ್ಯಕೀಯ ಕಾಲೇಜು ತಂದಾಗ ಟೀಕೆ ಬಂದಿತ್ತು. ಆರೋಗ್ಯ ಮೇಳದ ಬಗ್ಗೆಯೂ ಟೀಕೆ ಬಂದಿದೆ. ಈ ರೀತಿ ಟೀಕೆ ಬರುವುದು ಸರ್ವೇ ಸಾಮಾನ್ಯ. ಜನರ ಬಗ್ಗೆ ಬದ್ಧತೆ, ಕಾಳಜಿ ಇರುವವರು ಇದಕ್ಕೆ ಹೆದರಬೇಕಿಲ್ಲ. ಆದರೆ ನಾವು ಆತ್ಮತೃಪ್ತಿಯಿಂದ ಕೆಲಸ ಮಾಡಬೇಕು, ಜನರಿಗೆ ಇದರಿಂದ ಉಪಯೋಗವಾಗಬೇಕು ಎಂದರು.
ಉಚಿತ ಚಿಕಿತ್ಸೆ: ಆರೋಗ್ಯ ಮೇಳದಲ್ಲಿ ಮಾಡುವ ತಪಾಸಣೆ ಒಂದು ಹಂತವಾಗಿದೆ. ಬಳಿಕ ಜನರಿಗೆ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಲಾಗುವುದು. ಆ ಯೋಜನೆಯಡಿ ಫಲಾನುಭವಿ ಆಗಿಲ್ಲದಿದ್ದರೆ, ನಮ್ಮ ಫೌಂಡೇಶನ್‌ನಿಂದ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು
ಆರೋಗ್ಯ ಮೇಳ ಯಶಸ್ವಿ
ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ ಎರಡು ದಿನಗಳ ಬೃಹತ್ ಆರೋಗ್ಯ ಮೇಳ, ಲಕ್ಷಾಂತರ ಜನರ ಆರೋಗ್ಯ ತಪಾಸಣೆಯೊಂದಿಗೆ ಯಶಸ್ಸು ಕಂಡಿತು. ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಟ್ರಸ್ಟ್, ಬಾಲಗಂಗಾಧರನಾಥ ಸ್ವಾಮೀಜಿ ಕ್ಯಾಂಪಸ್‌ನಲ್ಲಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಏರ್ಪಡಿಸಿದ್ದ ಆರೋಗ್ಯ ಮೇಳಕ್ಕೆ ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಹಿನ್ನೆಲೆಯಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಇದು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ಮೇಳ ಎಂದು ಪ್ರಮಾಣ ಪತ್ರ ನೀಡಿತ್ತು. ಮೊದಲ ದಿನ ಮೇಳಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಗಮಿಸಿ, ಈ ರೀತಿಯ ಪ್ರಯತ್ನವನ್ನು ಎಲ್ಲಾ ಜಿಲ್ಲೆಗಳಲ್ಲಿ ಮಾಡಬೇಕು ಎಂದು ಸಲಹೆ ನೀಡಿದ್ದರು. ಭಾನುವಾರ ಕೂಡ ಮೇಳದಲ್ಲಿ ಅನೇಕರು ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಣ್ಣು, ಕಿವಿ, ದಂತ, ಚರ್ಮ, ಮೂಳೆ, ಹೃದಯ, ಶ್ವಾಸಕೋಶ ಸೇರಿದಂತೆ ಅನೇಕ ಪ್ರಕಾರದ ವೈದ್ಯಕೀಯ ತಪಾಸಣೆಯ ಉಚಿತ ಸೇವೆಯನ್ನು ಜನರು ಬಳಸಿಕೊಂಡರು.