Advertisement
ಉಚ್ಚಿಲ ಪೇಟೆಗಿಂತ ನೂರು ಮೀಟರ್ ದೂರದಲ್ಲಿ ಹೆದ್ದಾರಿಗೆ ತಾಗಿಕೊಂಡೇ ನಡೆಯುತ್ತಿದ್ದ ವಾರದ ಸಂತೆಗೆ ಬರುವ ಗ್ರಾಹಕರು ಮತ್ತು ಸಂತೆ ವ್ಯಾಪಾರಿಗಳು ಹೆದ್ದಾರಿ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದುದರಿಂದ ಅಪಘಾತ ವಲಯ ವಾಗಿ ಮಾರ್ಪಟ್ಟಿದ್ದು, ಅದರ ಜೊತೆಗೆ ಪದೇ ಪದೇ ಹೆದ್ದಾರಿ ಬದಿಯಲ್ಲಿ ವಾಹನ ಸಂಚಾರವೂ ಅಸ್ತವ್ಯಸ್ತಗೊಳ್ಳವಂತಾಗಿತ್ತು.
ಉಚ್ಚಿಲದಲ್ಲಿ ಹೆದ್ದಾರಿ ಬದಿಯ ತೆರೆದ ಪ್ರದೇಶದಲ್ಲಿ ಹೆದ್ದಾರಿಗೆ ತಾಗಿಕೊಂಡೇ ನಡೆಯುತ್ತಿದ್ದ ಸೋಮವಾರದ ಸಂತೆಯು ಬಲು ಅಪಾಯಕಾರಿ ಯಾಗಿದ್ದು ಈ ಬಗ್ಗೆ ಉದಯವಾಣಿ ಸುದಿನ (ಎ.29) ದಲ್ಲಿ ಹಿಂದೆ ಜನಪರ ಸುದ್ದಿಯನ್ನು ವರದಿ ಮಾಡಲಾಗಿತ್ತು. ಮೇ ತಿಂಗಳಲ್ಲಿ ವಾರದ ಸಂತೆ ಯನ್ನು ಎಸ್.ಎಲ್.ಆರ್.ಎಂ ಘಟಕದ ಬಳಿಯ ಖಾಲಿ ಪ್ರದೇಶಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿತ್ತಾದರೂ, ಕೋವಿಡ್ ಕಾರಣದಿಂದಾಗಿ ಜಿಲ್ಲಾಡಳಿತ ಸಂತೆಯನ್ನೇ ನಿರ್ಬಂಧಿಸಿದ್ದರಿಂದ ಸ್ಥಳಾಂತರ ಪ್ರಕ್ರಿಯೆ ರದ್ಧಾಗಿತ್ತು. ಇದನ್ನೂ ಓದಿ:ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು
ರಾಜ್ಯ ಸರಕಾರ ಕೊರೊನಾ ಕಾರಣದ ನಿರ್ಬಂಧಗಳನ್ನು ತೆರವುಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಾಯೋಗಿಕವಾಗಿ ಸಂತೆಯನ್ನು ಹಳೆ ಮಾರುಕಟ್ಟೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಡಾ ಗ್ರಾಮ ಪಂಚಾಯತ್‌ನ ಎಸ್‌ಎಲ್‌ಆರ್‌ಎಂ ಘಟಕದ ಬಳಿಗೆ ಸ್ಥಳಾಂತರಗೊಳಿಸಿತ್ತು. ಈ ವಾರದಿಂದ ಪೂರ್ಣ ಪ್ರಮಾಣದಲ್ಲಿ ವಾರದ ಸಂತೆಯನ್ನು ಪುನರಾರಂಭಿಸಲಾಗಿದ್ದು ವ್ಯಾಪಾರಿಗಳು ಮತ್ತು ಗ್ರಾಹಕರು ಅಪಾಯದ ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ಬಂದು ಮಾರಾಟ – ಖರೀದಿಯಲ್ಲಿ ತೊಡಗಿದ್ದಾರೆ.
Related Articles
ಸೋಮವಾರದ ಸಂತೆಯು ಹೆದ್ದಾರಿ ಬದಿಯ ಅಪಾಯಕಾರಿ ಪ್ರದೇಶದಿಂದ 45-50 ಮೀಟರ್ ದೂರದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಗೊಂಡಿರುವುದನ್ನು ಸಂತೆ ವ್ಯಾಪಾರಿಗಳು ಮತ್ತು ಗ್ರಾಹಕರು ಸ್ವಾಗತಿಸಿದ್ದಾರೆ. ವಾರದ ಸಂತೆ ಮತ್ತು ಮೀನು ಮಾರುಕಟ್ಟೆಗೆ ಬೇಕಿರುವ ಜಾಗವನ್ನು ಗ್ರಾ.ಪಂ. ಸೂಕ್ತ ರೀತಿಯಲ್ಲಿ ಗುರುತಿಸಿ, ಅದಕ್ಕೆ ಬೇಕಾದ ಕಟ್ಟಡ ಮತ್ತು ಮೂಲ ಸೌಕರ್ಯಗಳನ್ನು ಜೋಡಿಸಿ ಕೊಡಬೇಕಿದೆ. ಪ್ರಸ್ತುತ ಸಂತೆ ನಡೆಯುತ್ತಿರುವ ಪ್ರದೇಶವನ್ನು ಸಮತಟ್ಟುಗೊಳಿಸಿ, ಅಂಗಡಿಗಳಿಗೆ ಸೂಕ್ತ ಜಾಗವನ್ನು ನಿರ್ಧರಿಸಿ ವ್ಯಾಪಾರಿಗಳಿಗೆ ನೀಡುವ ಅಗತ್ಯವಿದೆ ಎಂದು ಸ್ಥಳೀಯರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ ತಿಳಿಸಿದ್ದಾರೆ.
Advertisement
ಮಳೆಗಾಲದ ಬಳಿಕ ಸೂಕ್ತ ವ್ಯವಸ್ಥೆಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನು ಮಾರುಕಟ್ಟೆ ಮತ್ತು ಸಂತೆ ಮಾರುಕಟ್ಟೆಗೆ ಸಮರ್ಪಕ ಸ್ಥಳಾವಕಾಶದ ಕೊರತೆಯಿದ್ದು, ಎಸ್‌ಎಲ್‌ಆರ್‌ಎಂ ಘಟಕದ ಬಳಿಯಲ್ಲಿ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸಲು ಒಪ್ಪಿಗೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೆದ್ದಾರಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ದೊರಕಿದಲ್ಲಿ ಮೀನುಗಾರಿಕಾ ಇಲಾಖೆಗೆ ಸಂಬಂಧಪಟ್ಟ ಮೂಲಗಳಿಂದ ಮತ್ತು ಗ್ರಾಮ ಪಂಚಾಯತ್‌ನ ಅನುದಾನವನ್ನು ಬಳಸಿಕೊಂಡು ಅವಳಿ ಯೋಜನೆಗಳಿಗಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಪ್ರಸ್ತುತ ಎಸ್‌ಎಲ್‌ಆರ್‌ಎಂ ಘಟಕದ ಬಳಿಯಲ್ಲಿ ಸಂತೆಗೆ ಜಾಗ ನೀಡಿ, ಸಂತೆ ಪ್ರಾರಂಭಿಸಲಾಗಿದೆ. ಮಳೆಗಾಲ ಮುಗಿದ ಬಳಿಕ ನೆಲ ಸಮತಟ್ಟು ಮಾಡಿ, ಸಂತೆ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ಕೊಡಲಾಗುವುದು.
– ಕುಶಾಲಿನಿ, ಪಿಡಿಒ, ಬಡಾ ಗ್ರಾ.ಪಂ.