ವಿಜಯಪುರ: ನಗರದಲ್ಲಿ ಖಾಸಗಿ ಫೈನಾನ್ಸ್ ಕಚೇರಿಗೆ ಹಾಡು ಹಗಲೇ ದರೋಡೆಗೆ ಯತ್ನಿಸಿ, ಅಪಾಯದ ಸೈರನ್ ಪ್ರಕರಣ ಮೊಳಗಿದ್ದರಿಂದ ಹೆಲ್ಮೆಟ್ ಧಾರಿ ದರೋಡೆಕೋರರು ಪರಾರಿಯಾಗಿರುವ ಘಟನೆ ಜರುಗಿದೆ.
ನಗರದ ಆಶ್ರಮ ರಸ್ತೆಯಲ್ಲಿನ ಮುತ್ತೂಟ್ ಫೈನಾನ್ಸ್ ಸೋಮವಾರ ಕಚೇರಿ ತೆರೆಯುತ್ತಿದ್ದಂತೆ ಚಿನ್ನ ಅಡ ಇಡುವವರಂತೆ ಇಬ್ಬರು ಆಗಂತುಕರು ಒಳಬಂದಿದ್ದಾರೆ. ಬೆಳಿಗ್ಗೆ 9-30ರ ಸುಮಾರಿಗೆ ಕಟ್ಟಡದ ಹೊರಗೆ ನಿಂತಿದ್ದ ಇನ್ನೂ ಮೂರು ಜನರು ಒಳಗೆ ಬಂದಿದ್ದು, ಅದರಲ್ಲಿ ಓರ್ವ ರಿವಾಲ್ವರ್ ತೆಗೆದು ಸಿಬ್ಬಂದಿಯನ್ನು ಬೆದರಿಸಿದ್ದಾನೆ. ಆದರೆ ಗುಂಡು ಹಾರಿಸಿದ ಬಗ್ಗೆ ಸ್ಪಷ್ಟವಾಗಿಲ್ಲ.
ಅಷ್ಟರಲ್ಲಿ ಅಪಾಯದ ಮುನ್ಸೂಚನೆ ಅರಿತ ಫೈನಾನ್ಸ್ ಸಿಬ್ಬಂದಿ ಎಚ್ಚರಿಕೆ ಗಂಟೆಯ ಬಟನ್ ಒತ್ತಿದ್ದು, ಸೈರನ್ ಮೊಳಗಿದ್ದರಿಂದ ಹೆಲ್ಮೆಟ್ ಧಾರಿ ದರೋಡೆಕೋರರು ಓಡಿ ಹೋಗಿದ್ದಾರೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ವಿಜಯಪುರ ಎಪಿಎಂಸಿ, ಗಾಂಧಿ ಚೌಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳಕ್ಕೆ ವಿಜಯಪುರ ಡಿವೈಎಸ್ಪಿ ನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ ಭೇಟಿ, ಪರಿಶೀಲನೆ. ಎಸ್ಪಿ ಅನುಪಮ ಅಗರವಾಲ ಭೇಟಿ ನೀಡಿ, ತನಿಖಾ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.