ಬೆಂಗಳೂರು: ಉತ್ತರ ವಿಭಾಗದ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಕಳವು, ಅತಿಕ್ರಮ ಪ್ರವೇಶ, ಚಿನ್ನಾಭರಣ ಕಳವು ಸೇರಿ 16 ವಿವಿಧ ಅಪರಾಧ ಪ್ರಕರಣಗಳಲ್ಲಿ ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದು, 50 ಲಕ್ಷ ರೂ. ಮೌಲ್ಯದ 956 ಗ್ರಾಂ ಚಿನ್ನಾಭರಣ, 1970 ಗ್ರಾಂ ಬೆಳ್ಳಿ ಸಾಮಗ್ರಿ, ಲ್ಯಾಪ್‌ಟಾಪ್, ಕ್ಯಾಮೆರಾ, ಮೊಬೈಲ್ ಹಾಗೂ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಾಲಹಳ್ಳಿ ಸಮೀಪದಲ್ಲಿರುವ ಭಾರತೀ ಯ ವಾಯುಸೇನೆ ಇಟಿಐ ಆವರಣದಲ್ಲಿ ಕಳ್ಳತನಕ್ಕೆ ಹೋಗಿದ್ದ ಕಳ್ಳನೊಬ್ಬ ಕಾಂಪೌಂಡ್ ಹಾರಿ ಭಾರತೀಯ ವಾಯು ಸೇನೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಬಳಿಕ ಈತನನ್ನು ಗಂಗಮ್ಮನಗುಡಿ ಪೊಲೀಸರು ವಿಚಾರಣೆ ನಡೆಸದಾಗ ಆರೋಪಿ ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಇಸ್ಲಾಂ (40) ಬಂಧಿತ. ಆರೋಪಿಯಿಂದ 17 ಲಕ್ಷ ಮೌಲ್ಯದ ಚಿನ್ನಾಭರಣ, ಲ್ಯಾಪ್‌ಟಾಪ್ ಜಪ್ತಿಮಾಡಲಾಗಿದೆ. ಆರೋಪಿ ವಿರುದ್ಧ ನಗರದ ವಿವಿಧಠಾಣೆಯಲ್ಲಿ 20ಕ್ಕೂ ಹೆಚ್ಚುಪ್ರಕರಣಗಳಿವೆ. ಜು.20ರಂದು ಆರೋಪಿ ರಾತ್ರಿಜಾಲಹಳ್ಳಿಈಸ್ಟ್ ನಿಷೇಧಿತ ಪ್ರದೇಶಕ್ಕೆಅಕ್ರಮವಾಗಿ ಕಾಂಪೌಂಡ್ ಗೋಡೆ ಜಿಗಿದು ಕೆಳಗೆ ಬಿದ್ದಿದ್ದಾನೆ. ಪರಿಣಾಮ ಆತನ ಸೊಂಟ, ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ಸಂಬಂಧ ಏರ್‌ಫೋರ್ಸ್ ಅಧಿಕಾರಿ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಲು ಹೋಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈತನ ಬಂಧನದಿಂದಾಗಿ ಐದು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಮನೆಕೆಲಸದಾಕೆ ಬಂಧನ: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಮಹಿಳೆಯನ್ನು ಬಂಧಿಸಿದ್ದು, ಆಕೆಯಿಂದ 8 ಲಕ್ಷ ರೂ. ಮೌಲ್ಯದ 140 ಗ್ರಾಂ ಚಿನ್ನಾಭರಣ, 1.2 ಕೆ.ಜಿ. ಬೆಳ್ಳಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ.