Advertisement
ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಪಂ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಎಂಟು ಮಂದಿಯ ಗುಂಪೊಂದು, ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದ ಪಶುವೈದ್ಯನೊಬ್ಬನ ಜೊತೆಗೂಡಿ ಪಾರ್ಟಿ ನಡೆಸಿತ್ತು. ಇದರಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಸೇರಿ ತಾಲೂಕು ಆರೋಗ್ಯಾಧಿಕಾರಿಯ ಸೋದರ, ಗ್ರಾಪಂ ಸದಸ್ಯ ಕೂಡ ಭಾಗಿಯಾಗಿದ್ದ. ಆತನನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಗ್ರಾಮದ ಏಳು ಮಂದಿಯನ್ನು ಗೃಹ ಬಂಧನದಲ್ಲಿ ಇರಿಸಿರುವ ಸಂತೇಹಳ್ಳಿ ಗ್ರಾಪಂ ಪಿಡಿಒ ಹಾಗೂ ಅಶಾ ಕಾರ್ಯಕರ್ತರು ಗ್ರಾಪಂ ಸದಸ್ಯನನ್ನು ಮಾತ್ರ ಊರಿನಲ್ಲಿ ತಿರುಗಲು ಬಿಟ್ಟಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ದೂರಿದ್ದಾನೆ.
ತಮ್ಮ ಕುಟುಂಬವನ್ನು ಹೀನ ದೃಷ್ಟಿಯಲ್ಲಿ ಕಾಣುತ್ತಿರುವುದನ್ನು ಸಹಿಸದೆ ಕುಟುಂಬ ಸಹಿತವಾಗಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಸಿದ್ದಾನೆ. ಬೆಳಗ್ಗೆ 10 ಗಂಟೆಗೆ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಗ್ರಾಪಂ ಕಚೇರಿಗೆ ಮೂರು ಲೀಟರ್ ಪೆಟ್ರೋಲ್‌ನೊಂದಿಗೆ ಬಂದ ವ್ಯಕ್ತಿಯು, ತನ್ನ ಹಾಗೂ ತನ್ನ ಕುಟುಂಬದವರ ಮೇಲೆ ಪೆಟ್ರೋಲ್ ಸುರಿದು ಅತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದನು. ಪ್ರಯತ್ನ ವಿಫಲ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅರೋಗ್ಯ ಸಿಬ್ಬಂದಿ ಆತ್ಮಹತ್ಯೆ ಯತ್ನವನ್ನು ತಡೆಯುವ ಪ್ರಯತ್ನ ನಡೆಸಿದರಾದರೂ ಸತತ ಐದು ಗಂಟೆಗಳ ನಡೆದ ಪ್ರಯತ್ನ ವಿಫಲವಾಗಿತ್ತು. ಅಂತಿಮವಾಗಿ ಸ್ಥಳಕ್ಕೆ ದಾವಿಸಿದ ಶಾಸಕ ನಂಜೇಗೌಡ ನೀಡಿದ ಭರವಸೆಯಿಂದ ಆತ್ಮಹತ್ಯೆ ನಿರ್ಧಾರವನ್ನು ಕುಟುಂಬವು ಕೈಬಿಟ್ಟಿತು. ಇದೊಂದು ರಾಜಕೀಯ ಪ್ರೇರಿತವಾಗಿರುವ ನಾಟಕ ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅಧಿಕಾರಿಗಳಿಗೂ ಮಾತನಾಡುತ್ತಿದ್ದ ದೃಶ್ಯ ಕಂಡು ಬಂತು.