Advertisement

ಶ್ರೀಮಂತ ವ್ಯಕ್ತಿಗಳ ದರೋಡೆಗೆ ಯತ್ನ: 9 ಆರೋಪಿಗಳ ಬಂಧನ

11:29 PM Oct 22, 2019 | Team Udayavani |

ಮಂಗಳೂರು: ನಗರದ ಹೊರವಲಯದ ಕೆಲರಾಯಿ- ಕಾಪೆಟ್ಟು ರಸ್ತೆಯ ಸ್ಮಶಾನವೊಂದರ ಬಳಿ ಕುಳಿತು ವ್ಯಕ್ತಿಯೊಬ್ಬರ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಶ್ರೀರಾಮ ಸೇನೆಯ ಸದಸ್ಯ ಸಹಿತ 9 ಮಂದಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಬಂಧಿತರು ಅ. 17 ರಂದು ನೀರುಮಾರ್ಗದಲ್ಲಿ ನಡೆದ ರಿಕ್ಷಾ ಚಾಲಕ ಸಂತೋಷ್‌ ಕೊಲೆ ಯತ್ನ ಪ್ರಕರಣದ ಆರೋಪಿಗಳೂ ಆಗಿದ್ದಾರೆ.

Advertisement

ಶ್ರೀರಾಮ ಸೇನೆಯ ಸದಸ್ಯ ಮಲ್ಲೂರು ನಿವಾಸಿ ಜೀವನ್‌ ಪೂಜಾರಿ (35), ಅರ್ಕುಳ ಕಂಪ ನಿವಾಸಿ ನಿತಿನ್‌ ಪೂಜಾರಿ (24), ಅಡ್ಯಾರ್‌ಕಟ್ಟೆ ಕೆಮಂಜೂರು ನಿವಾಸಿ ಪ್ರಾಣೇಶ್‌ (23), ಪಡು ಕಾಪೆಟ್ಟು ನಿವಾಸಿ ಗಣೇಶ್‌ (21), ಕಾಪೆಟ್ಟು ಸೈಟ್‌ ನಿವಾಸಿಗಳಾದ ಗಣೇಶ್‌ (21) ಮತ್ತು ಶಿವಾನಂದ ಆಚಾರಿ (28), ಅಡ್ಯಾರ್‌ಪದವು ನಿವಾಸಿ ರಾಘವೇಂದ್ರ (24), ಕೋನಿಮಾರ್‌ ಮಡಿವಾಳಕೋಡಿ ನಿವಾಸಿ ಸಂತೋಷ್‌ (29), ಕಂಕನಾಡಿ ನಿವಾಸಿ ಧನರಾಜ್‌ (24), ಎಕ್ಕೂರು ನಿವಾಸಿ ಧೀರಜ್‌ (24) ಬಂಧಿತ ಆರೋಪಿಗಳು.

ಪ್ರಕರಣದ ವಿವರ: ಜೀವನ್‌ ಮಲ್ಲೂರು ನೇತೃತ್ವದಲ್ಲಿ ಆರೋಪಿಗಳು ಅ.21ರಂದು ಬೆಳಗ್ಗೆ 5.30ರ ವೇಳೆಗೆ ಕೆಲರಾಯಿ ಕಾಪೆಟ್ಟು ರಸ್ತೆಯ ಸ್ಮಶಾನದ ಬಳಿ ಒಟ್ಟು ಸೇರಿ ವ್ಯಕ್ತಿಯೊಬ್ಬರ ದರೋಡೆಗೆ ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ರೌಡಿ ನಿಗ್ರಹದಳದ ಅಧಿಕಾರಿ ಜತೆ ಸೇರಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಯುವಕರು ಸ್ಮಶಾನದ ಬಳಿ ಸುತ್ತುವರಿದು ಮಾತನಾಡುತ್ತಿದ್ದು, ಪೊಲೀಸರನ್ನು ಕಂಡು ಪರಾರಿಗೆ ಯತ್ನಿಸಿದ್ದರು. ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಹಿಡಿದು ಅವರಿಂದ ಕಬ್ಬಿಣ ರಾಡ್‌, ಮರದ ಸೋಂಟೆ, ಚೂರಿ, ಮೆಣಸಿನ ಹುಡಿ, ಬೈಕ್‌, ಡಿಯೋ ಡಿಯೋ ವಾಹನ ಸೇರಿದಂತೆ ಸುಮಾರು 1.50ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದು ಆತನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಶ್ರೀಮಂತರ ದರೋಡೆಗೆ ಸಂಚು:
ಆರೋಪಿಗಳು ಬೊಂಡಂತಿಲ ಗ್ರಾಮದ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡುವ ಬಗ್ಗೆ ಒಳಸಂಚು ರೂಪಿಸಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಗುಗಿರಿ, ಲಕ್ಷ್ಮೀಗಣೇಶ್‌ ಮಾರ್ಗದರ್ಶನದಲ್ಲಿ, ಎಸಿಪಿ ಕೋದಂಡರಾಮ ನೇತೃತ್ವದ ರೌಡಿ ನಿಗ್ರಹದಳ, ಮಂಗಳೂರು ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್‌ ಭಜಂತ್ರಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದರು.

ಕೊಲೆಯತ್ನ ಪ್ರಕರಣದ ಖರ್ಚಿಗಾಗಿ ದರೋಡೆ ಯತ್ನ
ಅ.17ರಂದು ನೀರುಮಾರ್ಗ ಬಿತ್ತ್ಪಾದೆ ಸಮೀಪ ನಡೆದ ರಿಕ್ಷಾ ಚಾಲಕ ಸಂತೋಷ್‌ ಕೊಲೆ ಯತ್ನ ಪ್ರಕರಣದಲ್ಲೂ ಈ 9 ಮಂದಿ ಆರೋಪಿಗಳು ಭಾಗಿಯಾಗಿದ್ದರು.
ಈ ಕೊಲೆಯತ್ನ ಪ್ರಕರಣದ ಖರ್ಚು-ವೆಚ್ಚಗಳಿಗೆ ಹಣದ ಅವಶ್ಯಕತೆ ಇದ್ದುದರಿಂದ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ದರೋಡೆಗೆ ಯತ್ನಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.ಜc

Advertisement

ಕೊಲೆಯತ್ನ ಕೃತ್ಯದ ಹಿಂದೆ..
ಬಂಧಿತ 9 ಮಂದಿ ಆರೋಪಿಗಳು ಮತ್ತು ಕೊಲೆ ಯತ್ನಕ್ಕೊಳಗಾದ ಸಂತೋಷ್‌ ಹಿಂದೆ ಒಂದೇ ಸಂಘಟನೆಯಲ್ಲಿ ಗುರುತಿಸಿ ಕೊಂಡಿದ್ದರು. 2 ವರ್ಷಗಳ ಹಿಂದೆ ಸಂತೋಷ್‌ ಸಂಘಟನೆಯಿಂದ ಹೊರಗೆ ಬಂದಿದ್ದರು. ಸಂಘಟನೆ ಬಿಟ್ಟ ಬಳಿಕ ಸಂಘಟನೆಯ ಕೆಲವು ವಿಚಾರಗಳನ್ನು ವಿರೋಧಿಸುತ್ತಿದ್ದ. ಮುಖ್ಯವಾಗಿ ಯುವಕರು ಸಂಘಟನೆಯನ್ನು ಸೇರದಂತೆ ಬುದ್ಧಿ ಮಾತನ್ನೂ ಹೇಳುತ್ತಿದ್ದ. ಇದು ಮಾತ್ರವಲ್ಲದೆ ಇತ್ತೀಚೆಗೆ ಸಂಘಟನೆಯ ಯುವಕರು ದೈವಸ್ಥಾನವೊಂದರ ಬಳಿ ಗಾಂಜಾ ಸೇವಿಸುತ್ತಿದ್ದಾಗ ಅದನ್ನು ವಿರೋಧಿಸಿ ತರಾಟೆಗೆ ತೆಗೆದು ಕೊಂಡಿದ್ದ. ಈ ಎಲ್ಲ ಕಾರಣದಿಂದ ಸಂತೋಷ್‌ ಮೇಲೆ ಯುವಕರಿಗೆ ದ್ವೇಷವಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿತ್ತೆಂದು ಪೊಲೀಸ್‌ ವಿಚಾರಣೆ ವೇಳೆ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next