Advertisement

ನಿಮಿಷದಲ್ಲಿ ನಡೆದ ದರೋಡೆ ಯತ್ನ!

12:52 AM Aug 22, 2019 | Team Udayavani |

ಬೆಂಗಳೂರು: ನಗರದ ಜನನಿಬಿಡ ಪ್ರದೇಶ, ಪ್ಯಾಲೆಸ್‌ ಗುಟ್ಟಹಳ್ಳಿಯ ಸಾಮ್ರಾಟ್‌ ಜ್ಯುವೆಲ್ಲರಿ ಒಳಗೆ ನುಗ್ಗಿ, ದರೋಡೆಗೆ ಯತ್ನಿಸಿ, ವಿಫ‌ಲರಾಗಿ ಗುಂಡು ಹಾರಿಸಿ ಮರಳಲು ದುಷ್ಕರ್ಮಿಗಳು ತೆಗೆದುಕೊಂಡ ಸಮಯ ಕೇವಲ ಒಂದು ನಿಮಿಷ! ಚಿನ್ನಾಭರಣ ಮಳಿಗೆ ಇರುವ ಕಟ್ಟಡದ ಎರಡನೇ ಮಹಡಿಯಲ್ಲೇ ಮಾಲೀಕ ಆಶಿಶ್‌ ದಂಪತಿ ವಾಸಿಸುತ್ತಿದ್ದಾರೆ. ದುಷ್ಕರ್ಮಿಗಳು ಮಳಿಗೆಯೊಳಗೆ ಬಂದಾಗ ಒಬ್ಬ ಗ್ರಾಹಕರೂ ಇರಲಿಲ್ಲ.

Advertisement

ದುಷ್ಕರ್ಮಿಗಳು ಬಂದವರೇ “ಸಚಿನ್‌ ಸರ’ ಇದೆಯಾ ಎಂದು ಕೇಳುವ ನೆಪದಲ್ಲಿ ದರೋಡೆ ಯತ್ನ ನಡೆಸಿದ್ದಾರೆ. ಅಷ್ಟರಲ್ಲೇ ಮಳಿಗೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆ ರಾಖಿ ಪ್ರತಿರೋದ ತೋರಿದ್ದರಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಇದೆಲ್ಲ ಕೇವಲ ಒಂದು ನಿಮಿಷದ ಅಂತರದಲ್ಲಿ ನಡೆದಿದೆ.

ಮಳಿಗೆಯೊಳಗೆ ಯಾರೂ ಇಲ್ಲದ್ದನ್ನು ಗಮನಿಸಿಯೇ ಆರೋಪಿಗಳು ಹೊಂಚು ಹಾಕಿ ಒಳಬಂದಿರುವ ಸಾಧ್ಯತೆಯಿದೆ. ಈ ಹಿಂದೆಯೇ ದರೋಡೆಗೆ ಸಂಚು ರೂಪಿಸಿರುವ ಶಂಕೆಯೂ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ದುಷ್ಕರ್ಮಿಗಳು ಬಳಸಿದ ಗನ್‌ ಮೂಲದ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಕಳ್ಳಸಾಗಾಣಿಕೆ ಮೂಲಕ ಗನ್‌ ತರಿಸಿಕೊಂಡಿರುವ ಶಂಕೆ ಆರಂಭವಾಗಿದ್ದು ಈ ಬಗ್ಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಕೂಡ ಪ್ರತ್ಯೇಕ ತನಿಖೆ ಆರಂಭಿಸಿದೆ.

ಬೆಚ್ಚಿದ ಜನತೆ, ಅಂಗಡಿಗಳು ಬಂದ್‌: ಗುಂಡು ಹಾರಿಸಿ ದರೋಡೆ ಯತ್ನದ ವಿಚಾರ ಹಬ್ಬುತ್ತಲೇ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲೂ ಅಂಗಡಿ ಮಳಿಗೆಗಳಿವೆ ಹೋಟೆಲ್‌ಗ‌ಳಿವೆ. ಹೊಯ್ಸಳ ವಾಹನ ಕೂಡ ಅಲ್ಲಿಯೇ ಸದಾ ಇರಲಿದೆ. ಜತೆಗೆ, ಸಂಚಾರ ಪೊಲೀಸರು ಕೂಡ ಜಂಕ್ಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸದಾ ಜನನಿಬಿಡ ಪ್ರದೇಶದಲ್ಲಿ ಇಂತಹದ್ದೊಂದು ಕೃತ್ಯ ನಡೆಯುತ್ತದೆ ಎಂದು ಊಹೆ ಮಾಡಲಿಕ್ಕೂ ಆಗದು ಎಂದು ಸ್ಥಳೀಯರು ತಿಳಿಸುತ್ತಾರೆ.

ಸಾಮ್ರಾಟ್‌ ಜ್ಯುವೆಲರಿ ಶಾಪ್‌ ಸಮೀಪವೇ ಇರುವ ಇನ್ನೆರಡು ಜ್ಯುವೆಲರಿ ಶಾಪ್‌ಗ್ಳನ್ನು ಮಾಲೀಕರು ಬಂದ್‌ ಮಾಡಿದ್ದ ದೃಶ್ಯ ಕಂಡು ಬಂದವು. ಜ್ಯುವೆಲರಿ ಶಾಪ್‌ನ ಮುಂದೆ ನೂರಾರು ಮಂದಿ ಜಮಾಯಿಸಿ ಏನಾಗಿದೆ ಎಂದು ಕುತೂಹಲದಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ತಮ್ಮ ಮನೆಗಳ ಮೇಲೆ ಬಾಲ್ಕನಿಗಳಲ್ಲಿ ನಿಂತು ಏನಾಗಿದೆ ಎಂದು ಗಮನಿಸುತ್ತಿದ್ದರು.

Advertisement

ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಿದ ಮುರುಗನ್‌ “ಉದಯವಾಣಿ’ ಜತೆ ಮಾತನಾಡಿ, ” ಜೋರಾದ ಕಿರುಚಾಟ ಕೇಳಿ ಹೊರಬರುತ್ತಲೇ ಮೂವರು ಯುವಕರು ಓಡುತ್ತಿದ್ದರು, ಸುಮಾರು 25ರ ವಯೋಮಾನದ ಹುಡುಗರಾಗಿದ್ದು ಅವರ ಓಟ ಜಿಂಕೆ ವೇಗದಂತಿತ್ತು. ಒಬ್ಟಾತ ಹೆಲ್ಮೆಟ್‌ ಬಿಸಾಡಿ ಕೆಲವೇ ನಿಮಿಷಗಳಲ್ಲಿ ಓಡಿ ಹೋಗಿಬಿಟ್ಟರು. ಹೆಲ್ಮೆಟ್‌ ಅನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದರು.

ವ್ಯಾಪಾರದಲ್ಲಿ ತೊಡಗಿದ್ದಾಲೇ ಕೂಗಾಟ ಕೇಳಿಸಿಕೊಂಡು ನೋಡಿದಾಗ ಜ್ಯುವೆಲರಿ ಶಾಪ್‌ನಿಂದ ಹುಡುಗರು ಓಡುತ್ತಿದ್ದರು. ಅವರ ಹಿಂದೆ ಹಿಡಿಯಲು ಆಶಿಶ್‌ ಹಾಗೂ ಇತರರು ಯತ್ನಿಸುತ್ತಿದ್ದರು. ಕೆಲ ಹೊತ್ತಿನ ಬಳಿಕ ಪೊಲೀಸರು ಬಂದು ನೋಡಿದಾಗ ಗುಂಡಿನ ದಾಳಿ ನಡೆದಿದೆ ಎಂಬ ವಿಚಾರ ಗೊತ್ತಾಯಿತು. ಸದ್ಯ, ಅವರ ಪ್ರಾಣ ಉಳಿದಿದೆ ಎಂದು ಘಟನಾ ಸ್ಥಳದ ಸ್ವಲ್ಪವೇ ದೂರದಲ್ಲಿ ವ್ಯಾಪಾರ ಮಾಡುವ ಪ್ರೇಮಾ ನಿಟ್ಟುಸಿರು ಬಿಟ್ಟರು.

ಪೊಲೀಸ್‌ ಠಾಣೆ ಹತ್ತಿರದಲ್ಲಿದ್ದರೂ ಇಲ್ಲಿ ಸರಕಳ್ಳತನ ವಾಹನ ಕಳ್ಳತನ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.ಆದರೆ, ಕಡಿವಾಣ ಮಾತ್ರ ಬಿದ್ದಿಲ್ಲ. ಹೊಯ್ಸಳ ವಾಹನ ಸದಾ ಜಂಕ್ಷನ್‌ನಲ್ಲಿ ಇರಲಿದೆ. ಹೀಗಿದ್ದೂ ಇಂತಹದ್ದೊಂದು ದುರಂತ ನಡೆದಿರುವುದು ಆಘಾತಕಾರಿ ಸಂಗತಿ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಮಹಿಳೆಯೊಬ್ಬರು ತಿಳಿಸಿದರು. ಆರೋಪಿಗಳು ರಸ್ತೆಯಲ್ಲಿ ಓಡುವ ದೃಶ್ಯಗಳು ಸ್ಥಳೀಯ ಅಂಗಡಿಗಳ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಅಲ್ಲದೆ ಅನುಮಾನಾಸ್ಪದ ಬೈಕ್‌ ಕೂಡ ಪತ್ತೆಯಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧೈರ್ಯ ಹೇಳಿದ ಪೊಲೀಸರು: ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಭೇಟಿ ನೀಡಿ ಮಳಿಗೆ ಮಾಲೀಕ ಆಶಿಶ್‌ ಹಾಗೂ ರಾಖಿ ಅವರ ಬಳಿ ಚರ್ಚೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದು, ಧೈರ್ಯ ಹೇಳಿದರು. ವೈಯಾಲಿಕಾವಲ್‌ ಪೊಲೀಸರು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಸಿಸಿಬಿ ಡಿಸಿಪಿ ಕೆ.ಪಿ ರವಿಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಚಿನ್ನದ ಮಳಿಗೆಯಲ್ಲಿ ಬಿದ್ದಿದ್ದ ಗುಂಡು ಜಪ್ತಿ ಪಡಿಸಿಕೊಂಡು, ಕೆಲವು ಸಾಕ್ಷ್ಯಾಧಾರ ಕಲೆಹಾಕಿದೆ. ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಭೇಟಿ ನೀಡಿ ಮಳಿಗೆ ಮಾಲೀಕ ಆಶಿಶ್‌ ಹಾಗೂ ರಾಖಿ ಅವರ ಬಳಿ ಚರ್ಚೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದು, ಧೈರ್ಯ ಹೇಳಿದರು.

ಗನ್‌ ಬಂದದ್ದು ಎಲ್ಲಿಂದ?: ದುಷ್ಕರ್ಮಿಗಳು ಬಳಸಿದ ಗನ್‌ ಮೂಲದ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಕಳ್ಳಸಾಗಾಣಿಕೆ ಮೂಲಕ ಗನ್‌ ತರಿಸಿಕೊಂಡಿರುವ ಶಂಕೆ ಆರಂಭವಾಗಿದ್ದು ಈ ಬಗ್ಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಕೂಡ ಪ್ರತ್ಯೇಕ ತನಿಖೆ ಆರಂಭಿಸಿದೆ.

ವೃದ್ಧ ದಂಪತಿಯ ಧೈರ್ಯ ಮರುಕಳಿಕೆ: ಆ.11 ರ ರಾತ್ರಿ ತಮಿಳುನಾಡಿನ ತಿರುನಲ್ವೇಲಿ ಯಲ್ಲಿ ಇಬ್ಬರು ಮುಸುಕುಧಾರಿ ದರೋಡೆಕೋರರು ವೃದ್ಧ ದಂಪತಿ ಮನೆಗೆ ನುಗ್ಗಿದ್ದರು. ಆ ವೇಳೆಯೂ ದಂಪತಿ ಮನೆಯಲ್ಲಿದ್ದ ಕುರ್ಚಿ ಮತ್ತಿತರ ವಸ್ತುಗಳನ್ನು ಎಸೆದು ಅವರನ್ನು ಓಡಿಸಿ ದಿಟ್ಟತನ ಪ್ರದರ್ಶಿಸಿದ್ದರು. ಅದೇ ರೀತಿಯಲ್ಲಿ ಬೆಂಗಳೂರಿನಲ್ಲೂ ಘಟನೆ ನಡೆದಿದೆ.

ಹಗಲಿನ ವೇಳೆ ಈ ರೀತಿ ದರೋಡೆಕೋರರು ಕೃತ್ಯ ನಡೆಸುತ್ತಾರೆ ಎಂದರೆ ಯಾರನ್ನು ಹೊಣೆ ಮಾಡಬೇಕು ಗೊತ್ತಾಗುತ್ತಿಲ್ಲ. ಪೊಲೀಸರ ಭಯ ಇದ್ದರೆ ಕ್ರಿಮಿನಲ್‌ಗ‌ಳು ಇಂತಹ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ
-ಲೀಲಾ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next