ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ನಡೆದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳಾ ರೋಗಿಗಳ ಬಳಿಗೆ ಆರೋಪಿ ತೆರಳುವಷ್ಟರ ಮಟ್ಟಿಗೆ ಆಸ್ಪತ್ರೆಆಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದ್ದು ಹೇಗೆ ಎಂದು ಹಲವರು ಕಿಡಿಕಾರಿದ್ದಾರೆ.
ಜಿಮ್ಸ್‌ನಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಮೇಲೆ ರಾತ್ರಿ 12 ಗಂಟೆ ಸುಮಾರಿಗೆ ಪೇಮಸಾಗರ ಅಲಿಯಾಸ್ ಪಿಂಟು ಎನ್ನುವಾತ ಅತ್ಯಾಚಾರಕ್ಕೆ ಯತ್ನಿಸಿದ್ದ. ರೋಗಿಗಳ ಮೃತ ದೇಹಗಳನ್ನು ಶವಗಾರಕ್ಕೆ ಸಾಗಿಸುವ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಬೆಡ್ ಮೇಲೆ ಮಲಗಿಕೊಂಡಿದ್ದ ಮಹಿಳಾ ರೋಗಿಯ ಬಟ್ಟೆ, ಡೈಪರ್ ಹಾಗೂ ಯೂರಿನ್ ಪೈಪ್ ಕಿತ್ತು ಹಾಕಿ ಬಲಾತ್ಕಾರಕ್ಕೆ ಮುಂದಾಗಿದ್ದ. ಅಷ್ಟರಲ್ಲೇ ಆಕೆ ಎಚ್ಚರಗೊಂಡು ಕಿರುಚಿದ್ದಳು. ಆಗ ಅಕ್ಕ-ಪಕ್ಕದ ರೋಗಿಗಳಿಗೂ ಎಚ್ಚರವಾಗಿದ್ದರಿಂದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಸಮಯದಲ್ಲಿ ಪಿಂಟು ಕುಡಿದ ನಶೆಯಲ್ಲಿದ್ದ ಎನ್ನಲಾಗಿದೆ. ಘಟನೆ ತಿಳಿಯುತ್ತಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮತ್ತು ಆವರಣದಲ್ಲಿ ಮಲಗಿದ್ದ ಸಂಬಂಧಿಕರು ಕ್ಷಣ ಕಾಲ ಬೆಚ್ಚಿ ಬಿದ್ದರು. ಮಹಿಳೆಯ ಕುಟುಂಬಸ್ಥರು ಮಾಹಿತಿ ಅರಿತು ಆತಂಕದಿಂದಲೇ ಆಸ್ಪತ್ರೆಗೆ ದೌಡಾಯಿಸಿದರು. ಅಲ್ಲದೇ, ಕೆಲ ಸಂಘ-ಸಂಸ್ಥೆಗಳ ಕಾರ್ಯಕರ್ತರು ರಾತ್ರಿಯೇ ಆಸ್ಪತ್ರೆಗೆ ಬಂದರು. ಅಲ್ಲಿಂದ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಬ್ರಹ್ಮಪುರ ಠಾಣೆ ಇನ್‌ಸ್ಪೆಕ್ಟರ್ ಕಪಿಲ್‌ದೇವ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಆಗಮಿಸಿದರು. ಘಟನೆ ಬಗ್ಗೆ ವಿವರಣೆ ಪಡೆದ ಪೊಲೀಸರು ರಾತ್ರಿಯೇ ಆರೋಪಿಯನ್ನು ಬಂಧಿಸಿದರು.
ಆದರೆ, ಘಟನೆಯಿಂದ ಜಿಲ್ಲೆಯ ಪ್ರಮುಖ ಆಸ್ಪತ್ರೆಯಲ್ಲೇ ಮಹಿಳಾ ರೋಗಿಗಳಿಗೆ ರಕ್ಷಣೆವೇ ಇಲ್ಲವೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಅಗರವಾಗಿದೆ. ಮೊದಲಿನಿಂದಲೂ ರೋಗಿಗಳ ಬಗ್ಗೆ ಆಸ್ಪತ್ರೆಯವರು ಬೇಜಬಾವಾªರಿಯಿಂದ ವರ್ತಿಸುತ್ತಾರೆ. ಒಳಗಡೆ ರೋಗಿಗಳ ಆರೋಗ್ಯ ಸ್ಥಿತಿ-ಗತಿ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ.
ರೋಗಿಗಳ ಸಂಬಂಧಿಗಳು ಒಳಹೋಗದಂತೆ ತಡೆಯಲು ಬೌನ್ಸರ್‌ಗಳನ್ನು ನೇಮಿಸಲಾಗಿದೆ. ರಾತ್ರಿ ವೇಳೆ ಇಂತಹ ಹೀನ ಘಟನೆ ನಡೆಯುತ್ತಿದ್ದಾಗ ಆಸ್ಪತ್ರೆಯ ಸಿಬ್ಬಂದಿ ಮತ್ತು ಬೌನ್ಸರ್‌ಗಳು ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಂದು ಮಾನವ ಹಕ್ಕುಗಳ ಹೋರಾಟಗಾರ ರಿಯಜ್ ಖತೀಬ್ ಪ್ರಶ್ನೆ ಮಾಡಿದ್ದಾರೆ. ಮಹಿಳಾ ಸಂಘಟನೆ ಪ್ರತಿಭಟನೆ: ಕೊರೊನಾ ಸೋಂಕಿತೆ ಮೇಲೆ ಅತ್ಯಾಚಾರ ಯತ್ನ ಪ್ರಕರಣ ಖಂಡಿಸಿ ಹೋರಾಟಗಾರ್ತಿ ಕೆ.ನೀಲಾ ನೇತೃತ್ವದಲ್ಲಿ ಜನವಾದಿ ಮಹಿಳೆ ಸಂಘಟನೆಯಿಂದ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಆಸ್ಪತ್ರೆಯಲ್ಲಿ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ತೀರ ಆತಂಕಕಾರಿ ಸಂಗತಿಯಾಗಿದೆ. ಸುರಕ್ಷಿತ ಕ್ರಮ ಕಲ್ಪಿಸುವಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಕೆ.ನೀಲಾ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಜಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು. ಎಲ್ಲ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.