Advertisement

ಮೀನು ವ್ಯಾಪಾರಿಯ ಕೊಲೆ ಯತ್ನ : ಐವರು ಆರೋಪಿಗಳ ಬಂಧನ

10:36 AM Jun 12, 2019 | Vishnu Das |

ಮಲ್ಪೆ: ಮೀನಿನ ವ್ಯಾಪಾರಿ ಬಂಟ್ವಾಳ ಫರಂಗಿಪೇಟೆ ಪುದು ಗ್ರಾ.ಪಂ. ಸದಸ್ಯ ಕೆ. ಮಹಮ್ಮದ್‌ ರಿಯಾಝ್(34) ಅವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಸೋಮವಾರ ಬೆಳಗ್ಗೆ ಬೇಲೂರಿನಲ್ಲಿ ಹಿಡಿದು ಬಂಧಿಸಿದ್ದಾರೆ.

Advertisement

ಫರಂಗಿಪೇಟೆಯ ಇಸ್ಮಾಯಿಲ್‌ (45), ಆತನ ಸಹೋದರ ಮಹಮ್ಮದ್‌ ಗೌಸ್‌ (35), ಮಹಮ್ಮದ್‌ ಕೈಸರ್‌ (60), ಮುನೀರ್‌ (25) ಮತ್ತು ಅನ್ವರ್‌(25) ಬಂಧಿತ ಆರೋಪಿಗಳು. ಇವರಲ್ಲಿ ಪ್ರಕರಣದ ಪ್ರಮುಖ ಸೂತ್ರಧಾರಿ ಇಸ್ಮಾಯಿಲ್‌ ಎಂಬಾತ ರಿಯಾಝ್ ಕೊಲೆಗೆ ಸುಪಾರಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮಂಗಳವಾರ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಪೈಕಿ ಇಸ್ಮಾಯಿಲ್‌, ಗೌಸ್‌ ಹಾಗೂ ಮುನೀದ್‌ ಎಂಬುವವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಏನು ಘಟನೆಯಾಗಿತ್ತು
ಜೂ. 7ರಂದು ರಿಯಾಝ್ ಅವರು ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಸುಕಿನ ವೇಳೆ ಅಬ್ದುಲ್‌ ನಿಸಾರ್‌, ಜಾವೇದ್‌ ಮತ್ತು ಮೊಯಿದೀªನ್‌ ಅವರ ಜತೆ ಮೀನಿನ ವಾಹನದಲ್ಲಿ ಮಲ್ಪೆ ಮೀನುಗಾರಿಕೆ ಬಂದರಿಗೆ ಬಂದಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳ ತಂಡವೊಂದು ಮುಖಕ್ಕೆ ಮುಸುಕು ಹಾಕಿ ಬಂದು ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದರು.

ಮಿಂಚಿನ ಕಾರ್ಯಾಚರಣೆ
ತನಿಖೆ ಕೈಗೊಂಡ ಪೊಲೀಸರು ಮೂರು ತಂಡವನ್ನು ರಚಿಸಿ ಒಂದು ತಂಡವನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆರೋಪಿಗಳು ಬೇಲೂರಿನಲ್ಲಿ ತಲೆ ಮರೆಸಿಕೊಂಡ ಮಾಹಿತಿಯನ್ನು ಪಡೆದು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಲ್ಪೆ ಠಾಣೆ ಪೊಲೀಸ್‌ ಉಪನಿರೀಕ್ಷಕ ಮಧು ಬಿ.ಈ., ಪ್ರಕರಣದ ತನಿಖಾಧಿಕಾರಿಯಾಗಿದ್ದು, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹಳೆ ದ್ವೇಷವೇ ಕಾರಣ
ರಿಯಾಝ್ನ ಗ್ರಾಮ ಪಂಚಾಯತ್‌ ಸದಸ್ಯತ್ವ ಹಾಗೂ ಹಳೆ ದ್ವೇಷದಿಂದಲೇ ಕೊಲೆಗೆ ಸುಪಾರಿ ಕೊಡಲಾಗಿದೆ. ಫರಂಗಿಪೇಟೆಯ ಮಳಿಗೆ ಹಾಗೂ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿ ಕೆ. ಮೊಹಮ್ಮದ್‌ ರಿಯಾಝ್ ಹಾಗೂ ಇಸ್ಮಾಯಿಲ್‌ನ 2 ಗುಂಪಿನ ನಡುವೆ ಪದೇ ಪದೇ ಜಗಳವಾಗುತ್ತಿತ್ತೆನ್ನಲಾಗಿದೆ. ಗುಂಪಿನಲ್ಲಿ ಅನೇಕರಿದ್ದರೂ ರಿಯಾಝ್ ಗ್ರಾ.ಪಂ. ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ರಿಯಾಜ್‌ ಅವರನ್ನೇ ಟಾರ್ಗೆಟ್‌ ಮಾಡಿ ಕೊಲೆಗೆ ಸಂಚು ರೂಪಿಸಲಾಗಿತ್ತು. ಹಿಂದಿನ ಜಗಳದ ಅನುಮಾನದ ಮೇರೆಗೆ ಪೊಲೀಸರು ಇಸ್ಮಾಯಿಲ್‌ಗೆ ನೋಟಿಸ್‌ ಕೊಟ್ಟಿದ್ದು, ವಿಚಾರಣೆ ವೇಳೆ ಸುಪಾರಿ ಕೊಟ್ಟಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next