ಚಿಕ್ಕಬಳ್ಳಾಪುರ: ದೇವಾಲಯದ ಬೀಗವನ್ನು ಒಡೆದು ಹುಂಡಿಯನ್ನು ಕದಿಯಲು ಯತ್ನಿಸಿದ ಇಬ್ಬರು ಚೋರರನ್ನು ಗ್ರಾಮಸ್ಥರು ಹಿಡಿದು ಶಿಡ್ಲಘಟ್ಟ ಗ್ರಾಮಾಂತರ ಪೋಲಿಸರ ವಶಕ್ಕೆ ನೀಡಿರುವ ಘಟನೆ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದ ಸುರೇಶ್ ಕೋಣಂಗಿ ಬಿನ್ ರಾಮಪ್ಪ, ಲಕ್ಷ್ಮೀಪತಿ ಲಕ್ಕ ಬಿನ್ ಆಂಜಿನಪ್ಪ ಬಂಧಿತ ಆರೋಪಿಗಳು.
ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ-ಮೇಲೂರು ರಸ್ತೆಯಲ್ಲಿರುವ ಶ್ರೀಮ ಮಹೇಶ್ವರಮ್ಮ ದೇವಾಲಯದ ಬೀಗವನ್ನು ಹೊಡೆದು ಒಳನುಗ್ಗಿದ ಚೋರರು ದೇವಾಲಯದ ಹುಂಡಿಯನ್ನು ಕದಿಯಲು ಯತ್ನಿಸಿದಾಗ ಮಧ್ಯರಾತ್ರಿ ಸುಮಾರು 1 ಗಂಟೆಯಲ್ಲಿ ಮನೆಯಿಂದ ಹೊರಬಂದಿದ್ದ ನಾರಾಯಣಮೂರ್ತಿ ಎಂಬುವರು ಕಂಡು ಕೂಡಲೇ ಅವರ ಸಹೋದರ ಬಿ.ಕೆ.ಕೇಶವಮೂರ್ತಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಇಬ್ಬರು ಕಾರ್ಯಪ್ರವೃತರಾಗಿ ದೇವಾಲಯದ ಬಾಗಿಲನ್ನು ಹೊರಗಡೆಯಿಂದ ಬಂದ್ ಮಾಡಿ ಕಳ್ಳರನ್ನು ಹಿಡಿದು ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್‍ಠಾಣೆಯ ಪೋಲಿಸರ ವಶಕ್ಕೆ ನೀಡಿದ್ದಾರೆ.
ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್‍ಠಾಣೆಯ ಪಿಎಸ್‍ಐ ಲಿಯಾಖತ್ತುಲ್ಲಾ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಈ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿರುವ ಮಳ್ಳೂರು ಗ್ರಾಮದ ಮಧು ಮತ್ತು ಚಲಪತಿ ಎಂಬುವರು ಪರಾರಿಯಾಗಿದ್ದು ಅವರನ್ನು ಬಂಧಿಸಲು ಪೋಲಿಸರು ಬಲೆ ಬೀಸಿದ್ದಾರೆ.