Advertisement

Siddaramaiah ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ: ಕಾಂಗ್ರೆಸ್‌ ಶಾಸಕರು

11:45 PM Jul 25, 2024 | Team Udayavani |

ಬೆಂಗಳೂರು ಸುಮಾರು 45 ವರ್ಷಗಳ ಕಾಲ ಒಂದೇ ಒಂದು ಕಪ್ಪು ಚುಕ್ಕಿಯಿಲ್ಲದೆ ರಾಜಕೀಯ ಜೀವನ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯ ಆರೋಪ ಹೊರಿಸಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಬಿಜೆಪಿ-ಜೆಡಿಎಸ್‌ ಮಾಡುತ್ತಿವೆ. ಅವರ ಹುನ್ನಾರವನ್ನು ನಾವು ರಾಜ್ಯದ ಜನತೆಯ ಮುಂದಿಡುತ್ತೇವೆ ಎಂದು ಕಾಂಗ್ರೆಸ್‌ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.

Advertisement

ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುತ್ತೇವೆ ಎಂದು ಹೊರಟರೆ ಸಾಧ್ಯವಿಲ್ಲ. ಬಿಜೆಪಿ ಅವರು ಬಣ್ಣವಿಲ್ಲದೆ ನಾಟಕ ಮಾಡುತ್ತಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿಲ್ಲ. ಬಿಜೆಪಿ ಅವರು ಯಾವ ಉದ್ದೇಶ ಇಟ್ಟುಕೊಂಡು ಮೈಸೂರಿಗೆ ಪಾದಯಾತ್ರೆ ಮಾಡಲು ಹೊರಟಿದ್ದಾರೆ? ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಬಿಜೆಪಿ ಪ್ರಯತ್ನ ಸಫ‌ಲವಾಗದು ಎಂದರು.

ಎಚ್‌.ಡಿ. ಕುಮಾರಸ್ವಾಮಿ ಮುಡಾದಲ್ಲಿ ಅರ್ಜಿ ಹಾಕಿ 21 ಸಾವಿರ ಚದರಡಿ ಕೈಗಾರಿಕಾ ನಿವೇಶನ ಪಡೆದಿದ್ದಾರೆ. ಅವರಿಗೆ ಹೇಗೆ ನಿವೇಶನ ಕೊಟ್ಟಿದ್ದಾರೆ? ಸಾ.ರಾ. ಮಹೇಶ್‌, ಜಿ.ಟಿ. ದೇವೇಗೌಡ ಕೂಡ ನಿವೇಶನ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿ ನಾನು ಮೈಸೂರಿನಲ್ಲಿ ವಾಸವಿದ್ದೇನೆ. ನನಗೆ ಸೈಟು ಕೊಡಿ ಅಂತ ಸ್ವಂತ ಪತ್ರ ಬರೆದಿದ್ದರು. ಕುಮಾರಸ್ವಾಮಿ ಅಲ್ಲಿ ಏನಾದ್ರೂ ಕೈಗಾರಿಕೆ ಮಾಡಿದ್ದಾರಾ? ಎಚ್‌.ಡಿ. ಬಾಲಕೃಷ್ಣ, ಅವರ ಅತ್ತೆ, ಪತ್ನಿ ಕೂಡ ಜಮೀನು ಪಡೆದಿದ್ದಾರೆ. ಇದು ಅಕ್ರಮ ಅಲ್ಲವೇ? ಇದರ ಬಗ್ಗೆ ಯಾಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ.
– ಎಸ್‌.ಎನ್‌. ನಾರಾಯಣಸ್ವಾಮಿ, ಶಾಸಕ

ದಲಿತರ ಭೂಮಿ ಪಡೆದಿದ್ದಾರೆ ಎನ್ನುತ್ತಿದ್ದಾರೆ. ಆದರೆ ಕ್ರಯಕ್ಕೆ ಪಡೆದಿರುವ ಭೂಮಿ ಇದು. 1993ರಿಂದ ಇಲ್ಲಿಯವರೆಗೆ 31 ವರ್ಷ ಆಗಿದೆ. ಇದರ ಬಗ್ಗೆ ಎಲ್ಲಿಯೂ ಒಂದೇ ಒಂದು ದೂರು ಬಂದಿಲ್ಲ. ಅಣ್ಣ, ತಮ್ಮಂದಿರ ನಡುವೆ ವಿವಾದ ಬಂದಿಲ್ಲ. ಆದರೆ ಬಿಜೆಪಿಯ ಪ್ರವೇಶದಿಂದ ಗೊಂದಲ ಸೃಷ್ಟಿಯಾಗಿದೆ. 2021ರ ಪ್ರಕರಣವಿದು. ಆಗ ಏಕೆ ಬಾಯಿಬಿಡಲಿಲ್ಲ. ಆಗ ಸದನ ಕೂಡ ನಡೆದಿತ್ತು. ಅಂದಿನ ಮುಡಾ ಅಧ್ಯಕ್ಷ ಯಾವ ಪಕ್ಷದವರು? ಅಂದಿನ ನಗರಾಭಿವೃದ್ಧಿ ಸಚಿವರು ಯಾರು? ಅಂದು ಮುಖ್ಯಮಂತ್ರಿಯಾಗಿದ್ದವರು ಯಾರು? ಅವರಿಗೆ ಶಿಕ್ಷೆಯಾಗಬೇಕು ಅಂತ ಏಕೆ ಕೇಳಲಿಲ್ಲ.
– ನರೇಂದ್ರ ಸ್ವಾಮಿ, ಶಾಸಕ, ಮಳವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next