ಕಾರ್ಕಳ: ಪ್ರವಾಸಕ್ಕೆಂದು ಬಂದವರು ವರಂಗ ಕೆರೆಯಲ್ಲಿ ಪ್ರವೇಶ ನಿಷೇಧಿತ ಅವಧಿಯಲ್ಲಿ ಕೆರೆಗಿಳಿದು ಈಜಿ ದಡ ಸೇರಲು ಪ್ರಯತ್ನಿಸಿ ಇಕ್ಕಟ್ಟಿಗೆ ಸಿಲುಕಿದ ಮತ್ತು ಪ್ರವಾಸಕ್ಕೆ ಬಂದ ಇತರರು ರಕ್ಷಿಸಿದ ಘಟನೆ ಎರಡು ದಿನಗಳ ಹಿಂದೆ ಜೂ. 8 ರಂದು ನಡೆದಿದೆ.
ಘಟನೆ ಸಂಬಂಧ ರಕ್ಷಣೆಗಾಗಿ ಪರದಾಡಿದ ಯುವಕರ ವೀಡಿಯೊ ತಡವಾಗಿ ವೈರಲ್ ಆಗಿದೆ. ಹೆಬ್ರಿಯ ತಾಲೂಕಿನ ವರಂಗ ಜೈನ ಮಠದ ಕೆರೆಯಲ್ಲಿ ಪ್ರವಾಸ ನಿಮಿತ್ತ ಬಂದ ಇಬ್ಬರು ಹೊರಜಿಲ್ಲೆಗಳ ಯುವಕರು ಕೆರೆಯಲ್ಲಿ ಒಂದು ದಡದಿಂದ ಕೆರೆ ಮಧ್ಯೆ ಇರುವ ಜೈನ ಮಠಕ್ಕೆ ಈಜಿ ಸಾಗಲು ಪ್ರಯತ್ನಿಸಿದ್ದಾರೆ .ಪ್ರವೇಶ ನಿರ್ಭಂಧದ ಹೊತ್ತಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದಾರೆ.
ನೀರಿನ ಮದ್ಯದಲ್ಲಿ ಯುವಕರು ಈಜಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿಕೊಂಡು ರಕ್ಷಣೆಗೆ ಪರದಾಡಿದ್ದಾರೆ. ಘಟನಾ ಸ್ಥಳದಲ್ಲಿ ಪ್ರವಾಸಕ್ಕೆ ಅಗಮಿಸಿದ್ದ ಇತರೆ ಪ್ರವಾಸಿಗರು ಲೈಫ್ ಜಾಕೆಟ್ ಬಿಸಾಡಿ ಯುವಕರನ್ನು ರಕ್ಷಿಸಿದ್ದಾರೆ.ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರವೇಶ ನಿರ್ಬಂಧ ಸಮಯವಾದ್ದರಿಂದ ದೋಣಿ ನಡೆಸುವ ಅಂಬಿಗ ಹಾಗೂ ಪೂಜಾರಿ( ಅರ್ಚಕ) ಘಟನೆ ವೇಳೆ ಸ್ಥಳದಲ್ಲಿರಲಿಲ್ಲ. ಅಲ್ಲಿದ್ದವರು ಅಪಾಯಕ್ಕೆ ಸಿಲುಕಿದ ಯುವಕರ ಬಗ್ಗೆ ಮಾಹಿತಿ ಕೇಳಿದಾಗ ಬೆಂಗಳೂರಿನವರು ಎಂದಷ್ಟೆ ಹೇಳಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಹೊರಡುವ ಮುಂಚಿತ ಅಲ್ಲಿದ್ದವರು ದುಸ್ಸಾಹಸಕ್ಕೆ ಇಳಿದ ಯುವಕರನ್ನು ತರಾಟೆಗೆತ್ತಿಕೊಂಡಿದ್ದಾರೆ. ಬಳಿಕ ಯುವಕರು ಅಲ್ಲಿಂದ ತೆರಳಿದ್ದು. ಯುವಕರ ಬಗ್ಗೆ ಯಾರಿಗೂ ಮಾಹಿತಿ ತಿಳಿದಿಲ್ಲ
ಕೆರೆ, ಮಠದ ಆವರಣ ಸೇರಿದಂತೆ ಎಲ್ಲಾ ಕಡೆಗಳಲ್ಲಿಯು ಸೂಚನಾ ಫಲಕಗಳನ್ನು ಹಾಕಲಾಗಿದೆ . ಮಠದ ಆಡಳಿತ ಮಂಡಳಿಯು ಮೂಲಸೌಕರ್ಯವನ್ನು ಸೇರಿದಂತೆ ಕೆರೆಬಸದಿಗೆ ಆಗಮಿಸುವ ಭಕ್ತರು ದೋಣಿಯಲ್ಲಿ ಸಾಗಲು ಜೀವ ರಕ್ಷಕ ಜಾಕೆಟ್ ಗಳನ್ನು ನೀಡಿದೆ.ಆದರೆ ಪ್ರವೇಶ ನಿರ್ಬಂಧದ ಸಮಯದಲ್ಲಿ ಪ್ರವಾಸಿಗರು ಬಂದು ಕೆರೆಯ ನೀರಿಗೆ ಇಳಿಯುವ ಪ್ರಯತ್ನ ನಡೆಸುತಿದ್ದು ಇದು ಅಪಾಯಕಾರಿಯಾಗಿದೆ. ಇಲ್ಲಿ ಅಗತ್ಯವಾಗಿ ಭದ್ರತಾ ಸಿಬಂದಿ ನಿಯೋಜಿಸಬೇಕಿದೆ ಎಂದು ಸ್ಥಳಿಯರು ಹೇಳುತ್ತಾರೆ.
ಆಳವಾಗಿದೆ ಬಸದಿ ಕೆರೆ
ವರಂಗ ಕೆರೆ ತೀರಾ ಆಳವಿದ್ದು ಕೆಸರು ತುಂಬಿಕೊಂಡಿದೆ. ಮಳೆಗಾಲದ ಅವಧಿಯಲ್ಲಿ ಕೆರೆ ನೀರಿನಿಂದ ತುಂಬಿ ಸಮೃದ್ದವಾಗಿ ಗೋಚರಿಸುತ್ತದೆ. ಇಲ್ಲಿ ನೀರಿಗೆ ಇಳಿಯುವುದು ತೀರಾ ಅಪಾಯಕಾರಿಯಾಗಿದ್ದು ಹೊರಗಿನಿಂದ ಬರುವ ಪ್ರವಾಸಿಗರು ಕೆರೆ ಪರಿಸರದಲ್ಲಿ ದುಸ್ಸಾಹಸಕ್ಕೆ ಇಳಿದು ಅಪಾಯಕ್ಕೆ ಒಳಗಾಗುವ ಸಂಭವವೇ ಹೆಚ್ಚಿದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವುದು ಇಲ್ಲಿ ಅಗತ್ಯವಾಗಿದೆ.