ಮೂಡುಬಿದಿರೆ: ನಿಡ್ಡೋಡಿ ಕೊಲತ್ತಾರು ಪದವಿನಲ್ಲಿ ದಿಲ್ಲಿ ಮೂಲದ ಭೌಗೋಳಿಕ ಛಾಯಾ ಗ್ರಹಣ ತಂಡವೊಂದು ಡ್ರೋನ್ ಕೆಮರಾದೊಂದಿಗೆ ಆಗಮಿಸಿ ಮಂಗಳವಾರ ಸರ್ವೇ ನಡೆಸಲು ಪ್ರಯತ್ನಿಸಿದೆ. ಸುಮಾರು ಆರು ವರ್ಷಗಳ ಹಿಂದೆ ಇಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದ ಪ್ರಸ್ತಾವ ಸ್ಥಳೀಯರ ತೀವ್ರ ಪ್ರತಿರೋಧ ಎದುರಿಸಿ ಕೊನೆಗೆ ತಣ್ಣಗಾಗಿದ್ದು, ಈಗಿನ ಸರ್ವೇ ಪ್ರಯತ್ನ ಮತ್ತೆ ಈ ಉಷ್ಣ ವಿದ್ಯುತ್ ಸ್ಥಾವರ ಹೊಗೆಯುಗುಳಲಿದೆಯೇ ಅಥವಾ ಯುಪಿಸಿಎಲ್‌ನ ವಿಸ್ತರಣೆಗಾಗಿ ಪೂರ್ವ ಸಿದ್ಧತೆ ನಡೆಯುತ್ತಿದೆಯೇ ಎಂಬ ಅನುಮಾನ ಉಂಟು ಮಾಡಿದೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿಡ್ಡೋಡಿಗೆ ಬಂದ ಮೂವರಿದ್ದ ತಂಡ ದಿಲ್ಲಿಯ ಗ್ಲೋಬಲ್ ಎನರ್ಜಿ ಪ್ರೈ.ಲಿ. ಎಂಬ ಸಂಸ್ಥೆಯದು, ಅದಾನಿ ಸಂಸ್ಥೆಯ ವಿದ್ಯುತ್ ಪ್ರಸರಣ ಕಾರ್ಯಕ್ಕೆ ಸಂಬಂಧಿಸಿದುದು ಎಂದು ಹೇಳಲಾಗಿದೆ. ತಂಡದ ಕಾರ್ಯಾ ಚರಣೆಗೆ ಗ್ರಾಮಸ್ಥರು ಮತ್ತು ಮಾತೃಭೂಮಿ ಸಂರಕ್ಷಣ ಸಮಿತಿಯ ಕಾರ್ಯಕರ್ತರು ತಡೆ ಒಡ್ಡಿದ್ದಾರೆ.
ಛಾಯಾಚಿತ್ರಣ ನಡೆಸುವ ಕಾರಣ ಮತ್ತು ಉದ್ದೇಶ ಏನು ಎಂಬುದನ್ನು ತಿಳಿಸುವಂತೆ ಸ್ಥಳೀಯರು ಪಟ್ಟು ಹಿಡಿದಾಗ ತಂಡದವರು ಸೂಕ್ತ ಮಾಹಿತಿ, ದಾಖಲೆ ನೀಡುವಲ್ಲಿ ವಿಫಲರಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮಾತೃ ಭೂಮಿ ಸಂರಕ್ಷಣ ಸಮಿತಿ ದೂರು ಸಲ್ಲಿಸಿದೆ.
ಪ್ರತಿಭಟನೆ ವೇಳೆ ಕಲ್ಲಮುಂಡ್ಕೂರು ಗ್ರಾ.ಪಂ. ಪಿಡಿಒ ಉಗ್ಗಪ್ಪ ಮೂಲ್ಯ, ಮಾತೃಭೂಮಿ ಸಂರಕ್ಷಣ ಸಮಿತಿ ಅಧ್ಯಕ್ಷ ಅಲೊ#àನ್ಸ್ ಡಿ’ಸೋಜಾ, ಗ್ರಾ.ಪಂ. ಉಪಾಧ್ಯಕ್ಷ ಸುಂದರ ಪೂಜಾರಿ, ಸದಸ್ಯ ರಾಮ ಗೌಡ, ಮಾಜಿ ಸದಸ್ಯರು ಇದ್ದರು.
ಬುಧವಾರ ಮುಂಜಾನೆ ದಿಲ್ಲಿಯ ತಂಡದವರು ಮೂಡುಬಿದಿರೆ ಠಾಣೆಯಲ್ಲಿ ಹಾಜರಾಗಿ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.