Advertisement

ಪಕ್ಷಿ ಸಂಕುಲಕ್ಕೆ ದಣಿವಾರಿಸುವ ಪ್ರಯತ್ನ

05:46 PM Mar 04, 2022 | Shwetha M |

ತಾಳಿಕೋಟೆ: ಇಂದಿನ ಆಧುನಿಕ ತಂತ್ರಜ್ಞಾನದಿಂದ ಪಕ್ಷಿ ಸಂಕುಲ ನಶಿಸುತ್ತಿದೆ. ಪಕ್ಷಿಗಳನ್ನು ಉಳಿಸಿ-ಸಂರಕ್ಷಿಸುವ ಗೋಜಿಗೆ ಯಾರೊಬ್ಬರೂ ಹೋಗುತ್ತಿಲ್ಲ. ಇಲ್ಲಿಯ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ಶ್ರೀಗಳು ಪಕ್ಷಿ ಸಂಕುಲ ಉಳಿವಿಗೆ ಪಣ ತೊಟ್ಟಿದ್ದು, ಅರವಟಿಗೆ ನಿರ್ಮಿಸಿ ದಣಿವಾರಿಸುವ ಮಹತ್ಕಾರ್ಯಕ್ಕೆ ಕೈಹಾಕಿದ್ದಾರೆ.

Advertisement

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ರಸ್ತೆಯಲ್ಲೆಲ್ಲ ಸುತ್ತಾಡಿ ಜನರಿಗೆ ಉಚಿತ ಮಾಸ್ಕ್ ನೀಡುವುದರೊಂದಿಗೆ ಜಾಗೃತಿ ಕೈಗೊಂಡಿದ್ದರು. ಎರಡನೇ ಅಲೆಯಲ್ಲಿ ಬಡಜನರಿಗೆ ಊಟ ನೀಡಿದ್ದರು. 52 ಗ್ರಾಮಗಳ 22 ಸಾವಿರ ಕುಟುಂಬಗಳಿಗೆ ಮಠದಿಂದ ದವಸ-ಧಾನ್ಯಗಳ ಕಿಟ್‌ ನೀಡಿ ಹಸಿದ ಹೊಟ್ಟೆ ತಣಿಸಿದ್ದರು. ಇದೀಗ ಬೇಸಿಗೆ ಆರಂಭವಾಗುತ್ತಿದ್ದು, ಬಿಸಿಲಿನ ಝಳಕ್ಕೆ ಪಕ್ಷಿ-ಪ್ರಾಣಿ ಸಂಕುಲ ನರಳುತ್ತಿರುವುದನ್ನು ಕಂಡು ಹೇಗಾದರೂ ಮಾಡಿ ಈ ಪಕ್ಷಿಗಳ ಉಳಿವಿಗೆ ಪ್ರಯತ್ನಿಸಬೇಕೆಂಬ ಆಲೋಚನೆ ಬಂದಿದ್ದೇ ತಡ, ನಿರುಪಯುಕ್ತವಾಗಿ ಬಿಸಾಕಿದ ಬಿಸ್ಲೇರಿ ಬಾಟಲ್‌ಗ‌ಳನ್ನು ಸಂಗ್ರಹಿಸಿ ಅವುಗಳನ್ನು ಎರಡು ಭಾಗವಾಗಿ ಕತ್ತರಿಸಿ ಎರಡೂ ಬದಿಗಳಲ್ಲಿ ದಾರದಿಂದ ಕಟ್ಟಿ ಪಟ್ಟಣದಲ್ಲಿರುವ ಪ್ರತಿ ಗಿಡಗಳಿಗೆ ಕಟ್ಟಿ ಅವುಗಳಿಗೆ ನೀರು ತುಂಬಿಸುವುದರ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸುತ್ತಿದ್ದಾರೆ.

ಪಕ್ಷಿ ಸಂಕುಲ ಉಳಿಸಲು ಯುವಕರ ತಂಡ ಕಟ್ಟಿಕೊಂಡು ಸಂಚರಿಸುತ್ತಿರುವ ಶ್ರೀಗಳು, ಗಣೇಶ ನಗರ, ಶ್ರೀ ಖಾಸ್ಗತ ನಗರ, ಇಂದಿರಾ ನಗರ ಬಡಾವಣೆಗಳಲ್ಲಿ ಸಂಚರಿಸಿ ರಸ್ತೆ ಬದಿ ಬೆಳೆಸುತ್ತಿರುವ ಗಿಡಗಳಿಗೆ ಈ ಬಾಟಲ್‌ಗ‌ಳನ್ನು ಕಟ್ಟಿ ನೀರು ತುಂಬುತ್ತಿದ್ದಾರೆ. ಸಮಾಜಮುಖೀ ಕಾರ್ಯದಲ್ಲಿ ತೊಡಗಿರುವ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀಗಳ ಪ್ರಯತ್ನದ ಫಲವಾಗಿ ನೂರಾರು ಪಕ್ಷಿಗಳು ಮೂರೂ ಹೊತ್ತು ನೀರು ಕುಡಿಯುವಂತಾಗಿದೆ. ಚಿಟುಗು ಗುಬ್ಬಿ, ನೀಲಿ ಬಣ್ಣದ ಹಕ್ಕಿ, ಮರಕುಟುಕ, ಗುಬ್ಬಚ್ಚಿ, ಕಾಗೆ, ಗಿಳಿ, ಸಾಂಬಾರು ಕಾಗೆ ಸೇರಿದಂತೆ ಅನೇಕ ಪಕ್ಷಿಗಳು ದಾಹ ನೀಗಿಸಿಕೊಂಡು ದಣಿವಾರಿಸಿಕೊಳ್ಳುತ್ತಿವೆ.

ಪರಿಸರ ಉಳಿಯಬೇಕು. ಪಕ್ಷಿ ಸಂಕುಲ ಉಳಿಯಬೇಕು. ಹೀಗಾಗಿ ನಿರುಪಯಕ್ತ ಬಿಸ್ಲೇರಿ ಬಾಟಲ್‌ ಬಳಸಿ ಅರವಟ್ಟಿಗೆ ಮಾಡಲಾಗುತ್ತಿದೆ. ಇದಕ್ಕೆ ಯುವಕರ ತಂಡವೂ ಕೈಜೋಡಿಸಿದೆ. ಈಗಾಗಲೇ ಸಾವಿರ ಗಿಡ- ಮರಗಳಿಗೆ ಅರವಟಿಗೆ ಸಿದ್ಧಪಡಿಸಲು ಯೋಜನೆ ಹಾಕಿಕೊಂಡಿದ್ದೇವೆ. ನಿತ್ಯ ಸದ್ಯ 6 ತಂಡಗಳು ಪ್ರತಿನಿತ್ಯ ಅರವಟಿಗೆಗೆ ನೀರು ಹಾಕುವ ಕಾರ್ಯದಲ್ಲಿ ತೊಡಗಿಕೊಂಡಿವೆ. -ಬಾಲಶಿವಯೋಗಿ ಸಿದ್ಧಲಿಂಗ ದೇವರು, ಶ್ರೀ ಖಾಸ್ಗತ ಮಠ, ತಾಳಿಕೋಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next