Advertisement

ಪ್ರಶ್ನಿಸುವ ಪರಂಪರೆಯ ಕಗ್ಗೊಲೆಗೆ ಯತ್ನ: ಚಂಪಾ

11:46 AM Oct 06, 2017 | Team Udayavani |

ಬೆಂಗಳೂರು: ಜಾತಿ ಮತ್ತು ವರ್ಣ ವ್ಯವಸ್ಥೆ ಪ್ರಶ್ನಿಸುವ ಪರಂಪರೆಯನ್ನು ಕೊಲ್ಲುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್‌ ಹೇಳಿದರು. ಆಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಬೌದ್ಧಿಕ ಗುಲಾಮಗಿರಿ ಬಿಟ್ಟು ಸಮಕಾಲೀನ ಘಟ್ಟದಲ್ಲಿ ನಾವು ಎದುರಿಸುತ್ತಿರುವ ಜಾತಿ, ವರ್ಣ ಸಂಘರ್ಷ ಸೇರಿದಂತೆ ಹಲವು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಜನಾಂದೋಲನದ ಹೋರಾಟಗಳಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದ್ದು, ಪ್ರಜಾಪ್ರಭುತ್ವ ಉಳಿಯುತ್ತದೆ. ಸಾಹಿತ್ಯದಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿವರ್ತನೆ ಕಾಣಬಹುದು.

ಕುವೆಂಪು ಅವರ ಪರಂಪರೆಯಿಂದ ಆಧುನಿಕ ವೈಚಾರಿಕ ಪರಂಪರೆ ಮುಂದುವರೆದಿದೆ. ಬುದ್ಧ, ಬಸವ, ಅಂಬೇಡ್ಕರ್‌ ಅವರು ಪರಂಪರೆಯ ಸೂತ್ರಧಾರಿಗಳು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಜರಗನಹಳ್ಳಿ ಶಿವಶಂಕರ್‌,  ಮೌಡ್ಯ ಬಿತ್ತುವ ಮತ್ತು ಧಿಕ್ಕರಿಸುವ ವರ್ಗಗಳ ನಡುವಿನ ಪೈಪೋಟಿಯಲ್ಲಿ ಮೌಡ್ಯ ಬಿತ್ತುವವರದ್ದೇ ಮೇಲುಗೈ ಆಗಿದೆ. ಇದು ಆರೋಗ್ಯಕರ ಸಮಾಜಕ್ಕೆ ಮಾರಕವಾಗಿದೆ ಎಂದರು.

ಕನ್ನಡ ಸಾಹಿತ್ಯದಲ್ಲಿ  ನವೋದಯ ಸಾಹಿತ್ಯದ ಉಗಮದ ಬಳಿಕ ಚಳವಳಿಗಳ ರೂಪುರೇಷೆ ಬದಲಾಗಿದೆ. ಹೊಸ ಬರಹಗಾರರಿಗೆ ಚಂಪಾ ಅವರ ಬರವಣಿಗೆ, ಸಾಹಿತ್ಯಗಳು ಪ್ರೇರಣೆಯಾಗಲಿವೆ. ಅನೇಕ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ ಅವರು ತಮ್ಮ ಬರಹದ ಮೂಲಕ ಸಾಹಿತಿಗಳನ್ನು ಟೀಕಿಸಿದ್ದಾರೆ.

ಕನ್ನಡಕ್ಕೆ ಧಕ್ಕೆಯಾದಾಗ ಮುಂಚೂಣಿಯಲ್ಲಿ ನಿಂತು ಪ್ರತಿಭಟಿಸುವ ಕೆಚ್ಚೆದೆ ಅವರಲ್ಲಿದೆ ಎಂದು ಹೇಳಿದರು. ವಿಮರ್ಶಕ ಭೈರಮಂಗಲ ರಾಮೇಗೌಡ, ಅಖೀಲ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸುರೇಶ್‌ ಜೀವನ್ಮುಖೀ, ಲೇಖಕ ಟಿ.ಯಲ್ಲಪ್ಪ ಉಪಸ್ಥಿತರಿದ್ದರು.

Advertisement

ಕಾವ್ಯಗೌರವ: ಕಾರ್ಯಕ್ರಮದಲ್ಲಿ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ 15ಕ್ಕೂ ಹೆಚ್ಚು ಮಂದಿ ಕವಿಗಳು ತಮ್ಮ ಕಾವ್ಯದ ಮೂಲಕ ಗೌರವ ಸಮರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next