ಪಣಜಿ: ಕಳೆದ ಕೆಲವು ವರ್ಷಗಳಿಂದ ಗಣಿಗಾರಿಕೆ ವ್ಯವಹಾರ ಮುಚ್ಚಿದ್ದರಿಂದ ಗೋವಾದ ಗಣಿ ಅವಲಂಭಿತ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದ್ದರಿಂದ, ನಿರುದ್ಯೋಗ ಹೆಚ್ಚಳದಿಂದ ನಾಗರಿಕರು ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈಗ ಗಣಿಗಾರಿಕೆ ಸರ್ಕಾರದ ಒಡೆತನದಲ್ಲಿರುವುದರಿಂದ ಈ ಭಾಗದ ಗಣಿ ಗುತ್ತಿಗೆಯನ್ನು ಕೂಡಲೇ ಹರಾಜು ಮಾಡಿ ಸ್ಥಳೀಯರಿಗೆ ಉದ್ಯೋಗ, ವ್ಯಾಪಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.
ಗೋವಾದ ಪಿಸುರ್ಲೆ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವ ರಾಣೆ ಮಾತನಾಡಿ, ನನ್ನ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಹ ರಾಣೆಯವರಿಂದಾಗಿ ಐವತ್ತು ವರ್ಷಗಳಿಂದ ಈ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಈ ಭಾಗದ ಅಭಿವೃದ್ಧಿಯು ಅದೇ ಹಾದಿಯಲ್ಲಿ ಮುಂದುವರಿಯಲಿದೆ ಎಂದರು.
ಪರ್ಯೆ ಕ್ಷೇತ್ರದಿಂದ ನನ್ನ ಪತ್ನಿ ಡಾ. ದಿವ್ಯಾ ರಾಣೆ ಅವರನ್ನು ಮತದಾರರು ದಾಖಲೆ ಮತಗಳಿಂದ ಆಯ್ಕೆ ಮಾಡಿದ್ದೀರಿ. ಆದ್ದರಿಂದ ಪರ್ಯೆ ಮತ್ತು ವಾಲ್ಪೈ ಕ್ಷೇತ್ರಗಳು ಉದ್ಯೋಗ ಮತ್ತು ಅಭಿವೃದ್ಧಿಯಲ್ಲಿ ಎಂದಿಗೂ ಹಿಂದುಳಿದಿಲ್ಲ ಎಂದರು.
ಈ ಸಂದರ್ಭಧಲ್ಲಿ ಉಪಸ್ಥಿತರಿದ್ದ ಶಾಸಕಿ ದಿವ್ಯಾ ರಾಣೆ ಮಾತನಾಡಿ, ಗಣಿ ಉದ್ಯಮ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ಕೂಡಲೇ ಹರಾಜಿನಲ್ಲಿ ಗಣಿ ಗುತ್ತಿಗೆ ತೆಗೆದು ಮೊದಲಿನಂತೆ ಸ್ಥಳೀಯರಿಗೆ ಆದ್ಯತೆ ನೀಡಲು ಶ್ರಮಿಸಲಾಗುವುದು ಎಂದರು.
ನಾಗರಿಕರು ಎದುರಿಸುತ್ತಿರುವ ನೆಲ, ಜಲ ಮತ್ತು ಉದ್ಯೋಗದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ನಮ್ಮ ಕ್ಷೇತ್ರದಲ್ಲಿ ಎರಡು ಕೈಗಾರಿಕಾ ವಸಾಹತುಗಳಿದ್ದು, ಅದರ ಲಾಭ ಸ್ಥಳೀಯರಿಗೆ ಸಿಗಬೇಕು. ಅಲ್ಲದೆ ನಾವು ಈ ಪ್ರದೇಶವನ್ನು ಸೂಕ್ಷ್ಮ ಪ್ರದೇಶದಿಂದ ಹೊರಗಿಡಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹೋಂಡಾ ಜಿಲ್ಲಾ ಪಂಚಾಯತ್ ಸದಸ್ಯ ಸಗುನ್ ವಾಡ್ಕರ್, ಸಾಮಾಜಿಕ ಕಾರ್ಯಕರ್ತರಾದ ವಿನೋದ ಶಿಂಧೆ, ಪಂಚಾಯತ ಅಧ್ಯಕ್ಷ ದೇವಾನಂದ್ ಪರಬ್, ಉಪಾಧ್ಯಕ್ಷೆ ಬಿಜಿಲಿ ಗಾವಡೆ, ರೂಪೇಶ ಗಾವಡೆ, ಆತ್ಮಾರಾಮ್ ಪರಬ್, ಮತ್ತಿತರರು ಉಪಸ್ಥಿತರಿದ್ದರು.