Advertisement
ಅರಣ್ಯ ಇಲಾಖೆಯಿಂದ ಭೂಮಿಯನ್ನು ಲೀಸ್‌ಗೆ ಪಡೆದು ಕಾರ್ಯಾಚರಿಸುತ್ತಿದ್ದ ಕೃಷಿ ಸಂಶೋಧನ ಕೇಂದ್ರದ ಭೂಮಿಯನ್ನು ನವೀಕರಿಸದ ಕಾರಣ ಕೈ ತಪ್ಪುವ ಭೀತಿ ಉಂಟಾದ ಹಿನ್ನೆಲೆಯಲ್ಲಿ ಸಹಕಾರಿ ಧುರೀಣ ಬಾಲಕೃಷ್ಣ ವಾಲ್ತಾಜೆ ಮತ್ತಿತರ ಕೃಷಿಕರ ನಿಯೋಗ ಶುಕ್ರವಾರ ಸುಬ್ರಹ್ಮಣ್ಯ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿಯಾಗಿ ಮಧ್ಯ ಪ್ರವೇಶಿಸುವಂತೆ ಮನವಿ ಸಲ್ಲಿಸಿದೆ.
ಮನವಿ ಸ್ವೀಕರಿಸಿ ಮಾಹಿತಿ ಪಡೆದ ಶ್ರೀಗಳು, ಈ ಹಿಂದೆ ಇಂತಹದ್ದೆ ಸಮಸ್ಯೆ ಬಂದಿದ್ದಾಗ ತಾನು ಕೇಂದ್ರ ಹಾಗೂ ರಾಜ್ಯದ ಸಚಿವರಿಗೆ, ಸಂಸದರಿಗೆ ಮನವಿ ಮಾಡಿದ್ದೆ ಎಂದು ಹೇಳಿದರಲ್ಲದೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಕಿದು ಕೇಂದ್ರದ ಸಮಸ್ಯೆ ಇತ್ಯರ್ಥಪಡಿಸಿ ಶಾಶ್ವತ ಪರಿಹಾರ ಕ್ರಮಕ್ಕೆ ಸರಕಾರವೇ ಮುತುವರ್ಜಿ ವಹಿಸಿ ರೈತರ ಹಿತ ಕಾಯುವಂತೆ ಶ್ರೀಗಳು ಈ ವೇಳೆ ಮನವಿ ಮಾಡಿದರು. ತನ್ನ ಮನವಿಗೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.
Related Articles
ಜಿನ್ ಬ್ಯಾಂಕು ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರಕಾರದ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಿ ಚರ್ಚಿಸುವೆ. ಇಲ್ಲಿನ ಅಂತಾರಾಷ್ಟ್ರೀಯ ಸಂಶೋಧನ ಕೇಂದ್ರದಿಂದ ದೇಶದ ಕೃಷಿಕರಿಗೆ ಬಹಳಷ್ಟು ಪ್ರಯೋಜನಕಾರಿ. ಕೃಷಿ ಪ್ರಧಾನವಾದ ಈ ಭಾಗದಲ್ಲಿ ಇರುವ ಏಕೈಕ ಕೇಂದ್ರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುವುದಾಗಿ ಶ್ರೀಗಳು ಭರವಸೆ ಇತ್ತರು. ಕೃಷಿಕ ನಾಗೇಶ್ ಕೈಕಂಬ ಉಪಸ್ಥಿತರಿದ್ದರು.
Advertisement
ತೆಂಗು ಸಂಶೋಧನ ಕೇಂದ್ರ ಕೈ ತಪ್ಪುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಹಿಂದೆ ತಾನು ಕೇಂದ್ರ ಕೃಷಿ ಸಚಿವರ ಜತೆ ಅಧಿಕಾರಿಗಳ ಸಮ್ಮುಖವೇ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದ್ದೆ. ಆ ಬಳಿಕವೂ ನೋಟಿಸ್ ಜಾರಿಯಂತಹ ಸಮಸ್ಯೆ ಪುನರಾವರ್ತನೆ ಆಗುತ್ತಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ.– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು