Advertisement

7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ಯತ್ನ

12:28 PM Jan 18, 2017 | Team Udayavani |

ದಾವಣಗೆರೆ: ಇತ್ತೀಚೆಗೆ ಕಾಂಗ್ರೆಸ್‌ ಸರ್ಕಾರ 7ನೇ ವೇತನ ಜಾರಿಯ ಬಗ್ಗೆ ಮಾತನಾಡುತ್ತಿದೆ. ಬಿಜೆಪಿ ಸರ್ಕಾರದ ಮೂಗು ಹಿಡಿದು 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಪ್ರಯತ್ನಿಸಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮಂಗಳವಾರ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

Advertisement

ಉತ್ತಮ ನಾಗರಿಕ ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ನೆಮ್ಮದಿ ಮತ್ತು ಗೌರವದಿಂದ ಜೀವನ ನಡೆಸುವಂತಾಗಬೇಕು ಎಂಬ ಕಾರಣಕ್ಕೆ ಬಿಜೆಪಿ ಆಡಳಿತಾವಧಿಯಲ್ಲಿ ಹಿಂದಿನ ಎಲ್ಲ ಸರ್ಕಾರಗಳಗಿಂತಲೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. 5 ವರ್ಷದ ಅವಧಿಯಲ್ಲಿ ಶಿಕ್ಷಣ ಇಲಾಖೆಗೆ 7 ಸಾವಿರ ಕೋಟಿ ಅನುದಾನವನ್ನು 17 ಸಾವಿರ ಕೋಟಿಗೆ ಹೆಚ್ಚಿಸಲಾಗಿತ್ತು ಎಂದು ತಿಳಿಸಿದರು. 

ನನ್ನ ಅಧಿಕಾರವಧಿಯಲ್ಲಿ 1987 ರಿಂದ 1995ರ ವರೆಗೆ ಪ್ರಾರಂಭವಾದ ಶಾಲೆಗೆ ಅನುದಾನ ನೀಡುವ ಮೂಲಕ 20 ಸಾವಿರ ಕುಟುಂಬಕ್ಕೆ ಜೀವನ ಭದ್ರತೆ, 8 ಸಾವಿರ ಪ್ರೌಢಶಾಲಾ ಸಹ ಶಿಕ್ಷಕರ, 4 ಸಾವಿರ ಉಪನ್ಯಾಸಕರ ನೇರ ನೇಮಕ, 1,525 ಅರೆ ಕಾಲಿಕ ಶಿಕ್ಷಕರ ಖಾಯಂ, ಇಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜು ಉಪನ್ಯಾಸಕರಿಗೆ ಯುಜಿಸಿ ವೇತನ, 434 ಜೆಓಸಿ ಶಿಕ್ಷಕರ ಖಾಯಂ… ಈ ಕಾರ್ಯಗಳನ್ನು ನನ್ನ ಕರ್ತವ್ಯದಂತೆ ಮಾಡಿದ್ದೇನೆ.

7ನೇ ವೇತನ ಆಯೋಗದ ವಿಚಾರದ ಬಗ್ಗೆಯೂ ನೀಡಿರುವ ಭರವಸೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದೇ ಇಲ್ಲ. ಅಧಿಕಾರಕ್ಕೆ ಬಂದಲ್ಲಿ ಮಾಡಿಯೇ ತೀರುತ್ತೇನೆ ಎಂದು ತಿಳಿಸಿದರು. ಒಳ್ಳೆಯ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದು. ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಮೋಹಕ್ಕೆ ಒಳಗಾಗದೆ ಪರಿಪೂರ್ಣ ವ್ಯಕ್ತಿತ್ವದವರಾಗಿ ಬೆಳೆಯಲು ಸಮಾಜಕ್ಕೆ ಬೇಕಾದವರಾಗಿ ಜೀವಿಸುವಂತಹ ಮನೋಭಾವ ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸುವಂತಾಗಬೇಕು. 

ಶಿಕ್ಷಣದ ಮೌಲ್ಯ ಹೆಚ್ಚಿಸಬೇಕು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಭೀಕರ ಬರಗಾಲ ಇರುವಂತಹ ಸಂದರ್ಭದಲ್ಲಿ ಶಿಕ್ಷಕ ಸಮುದಾಯ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಂಥಹ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು. ನಾನು, ಯಾವುದೇ ಜಾತಿ, ಜನಾಂಗ, ಧರ್ಮ, ಕುಲ ನೋಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರ್ವರಿಗೂ ಸಮಪಾಲು… ಸಮಬಾಳು ಎನ್ನುವಂತೆ ಕೆಲಸ ಮಾಡಿದ್ದೇನೆ. 

Advertisement

ಸಿದ್ದರಾಮಯ್ಯನವರೂ ಗಮನ ನೀಡದಿದ್ದ ಕಾಗಿನೆಲೆ ಅಭಿವೃದ್ಧಿಗೆ 400 ಕೋಟಿ ನೀಡಿದ್ದೇನೆ. ಯಡಿಯೂರಪ್ಪ ಒಂದು ಜಾತಿ, ಆ ಜಾತಿಯ ಮಠಾಧೀಶರಿಗೆ ಕೆಲಸ ಮಾಡುತ್ತಾರೆ ಎನ್ನುವವರು ಹೋಗಿ ಕಾಗಿನೆಲೆ ನೋಡಿಕೊಂಡು ಬರಲಿ ಎಂದು ತಾಕೀತು ಮಾಡಿದರು. ಆಗ್ನೇಯ ಶಿಕ್ಷಕರ ಕ್ಷೇತ್ರದ 5 ಜಿಲ್ಲೆ, 35 ತಾಲೂಕಿನ ಒಟ್ಟಾರೆ 21,354 ಮತದಾರರಿದ್ದು, ದಾವಣಗೆರೆ ಜಿಲ್ಲೆ ಮೂರು ತಾಲೂಕಿನಿಂದ ಒಟ್ಟು 3,345 ಮತದಾರರು ಇದ್ದಾರೆ.

ನಮ್ಮ ಪಕ್ಷದ ಅಭ್ಯರ್ಥಿ ಪಿ.ಆರ್‌. ಬಸವರಾಜ್‌ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು. ಈ ಮಹತ್ವದ ಚುನಾವಣೆಯಲ್ಲಿ ಗೆದ್ದ ನಂತರ 35 ವಿಧಾನ ಸಭಾ ಕ್ಷೇತ್ರದಲ್ಲಿ ಆಗುವ ಬದಲಾವಣೆ ಎಲ್ಲರಿಗೂ ಗೊತ್ತಾಗಲಿದೆ ಎಂದು ಹೇಳಿದರು. ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಬಿಜೆಪಿ ಅಧಿಕಾರವಧಿಯಲ್ಲಿ 5 ಮತ್ತು 6ನೇ ವೇತನ ಆಯೋಗ ಜಾರಿ, ಶಾಲಾ ಕಟ್ಟಡ, ಶೌಚಾಲಯ ನಿರ್ಮಾಣದಂಥಹ ಅಭಿವೃದ್ಧಿ ಕೆಲಸ ಮಾಡಲಾಗಿತ್ತು.

ಮತ್ತೂಮ್ಮೆ ಮುಖ್ಯಮಂತ್ರಿ ಆಗಲಿರುವ ಯಡಿಯೂರಪ್ಪನವರು 7ನೇ ವೇತನ ಆಯೋಗ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ವೈ, ಎ. ನಾರಾಯಣಸ್ವಾಮಿ ಅವರಂತೆ ಪಿ.ಆರ್‌. ಬಸವರಾಜ್‌ ಅವರನ್ನೂ ಗೆಲ್ಲಿಸಬೇಕುಎಂದು ಮನವಿ ಮಾಡಿದರು. ಆಗ್ನೇಯ ಶಿಕ್ಷಕರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪಿ.ಆರ್‌. ಬಸವರಾಜ್‌ ಮಾತನಾಡಿ, ಸಮಾಜಸೇವಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಶಿಕ್ಷಕರ ತರಬೇತಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನಾನು ಶಿಕ್ಷಕರ ಎಲ್ಲ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ.

ಹಾಗಾಗಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಶಾಸಕರಾದ ವೈ.ಎ. ನಾರಾಯಣಸ್ವಾಮಿ, ಅರುಣ್‌ ಶಹಾಪುರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರ, ಮಾಡಾಳ್‌ ವಿರುಪಾಕ್ಷಪ್ಪ, ಬಿ.ಪಿ. ಹರೀಶ್‌, ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್‌ ಸಿಂಗನಕೆರೆ ಮಾತನಾಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಉಮಾ ರಮೇಶ್‌, ಉಪಾಧ್ಯಕ್ಷ ಡಿ. ಸಿದ್ದಪ್ಪ, ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next