Advertisement

ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ; 20 ಜನರ ಬಂಧನ

11:39 PM Nov 01, 2023 | Team Udayavani |

ಕಲಬುರಗಿ: ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಆಚರಣೆ ಸಂಭ್ರದಲ್ಲಿರುವಾಗಲೇ ಮಹಾ ನಗರದಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗೆದ್ದಿದೆ. ಬುಧವಾರ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಬೆಳಗ್ಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌.ಪಾಟೀಲ್‌ ನರಿಬೋಳ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯ ಧ್ವಜ ಹಾರಿಸಲು ಯತ್ನಿಸಿದರು. ಅವರನ್ನು ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಬಂಧಿಸಿದರು.

Advertisement

ಕಳೆದ ಐದು ವರ್ಷಗಳಿಂದ ಶಾಂತವಾಗಿದ್ದ ಹೋರಾಟಗಾರರು ನಗರದ ಕೋರ್ಟ್‌ ಸರ್ಕಲ್‌ ಬಳಿ ಜಮೆಯಾಗಿ ಪ್ರತ್ಯೇಕ ರಾಜ್ಯದ ಬಾವುಟದೊಂದಿಗೆ ಮೆರವಣಿಗೆ ಹೊರಟಿದ್ದರು. ಯುನೈಟೆಡ್‌ ಆಸ್ಪತ್ರೆ ಬಳಿ ಅವರನ್ನು ತಡೆದ ಪೊಲೀಸರು ಅಧ್ಯಕ್ಷ ಎಂ.ಎಸ್‌. ಪಾಟೀಲ್‌, ಮುಖಂಡ ರಾದ ಉದಯ ಕುಮಾರ ಜೇವರ್ಗಿ, ವಿನೋದಕುಮಾರ ಜೇನೆವರಿ, ಲಕ್ಷ್ಮೀಕಾಂತ ಮುಂತಾದವರನ್ನು ಬಂಧಿಸಿ ಕರೆದೊಯ್ದರು.

ಬೆಳಗಾವಿ ಪ್ರವೇಶಕ್ಕೆ ಶಿವಸೇನೆ ಯತ್ನ
ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರತಿಯಾಗಿ ನಾಡದ್ರೋಹಿ ಎಂಇಎಸ್‌ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಯ ಗಡಿ ಪ್ರವೇಶಿಸಲು ಆಗಮಿಸಿದ್ದ ಶಿವಸೇನೆಯ ಕಾರ್ಯಕರ್ತರನ್ನು ನಿಪ್ಪಾಣಿ ಕೊಗನ್ನೊಳ್ಳಿ ಚೆಕ್‌ಪೋಸ್ಟ್‌ ಬಳಿ ಪೊಲೀಸರು ತಡೆದು ವಾಪಸ್‌ ಕಳಿಸಿದ್ದಾರೆ. ಬೆಳಗಾವಿಗೆ ಆಗಮಿಸಲು ಯತ್ನಿಸಿದ ಎಂಇಎಸ್‌ ಕಾರ್ಯಕರ್ತರಿಗೆ ಪೊಲೀಸರು ಪ್ರವೇಶ ನಿಷೇಧಿಸಿದ್ದರಿಂದ ಅವರು ಗಡಿಯಲ್ಲಿ ಹೈಡ್ರಾಮಾ ಮಾಡಿದರು. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್‌ ಅವರು ಮಹಾರಾಷ್ಟ್ರದ ಕೆಲವರಿಗೆ ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಆದರೆ ಬುಧವಾರ ಬೆಳಗ್ಗೆ ಮಹಾರಾಷ್ಟ್ರದ ಗಡಿಯಿಂದ ರಾಜ್ಯದ ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಕ್ಕೆ ಮುಂದಾಗಿದ್ದ ಕೊಲ್ಲಾಪುರ ಜಿಲ್ಲಾ ಉದ್ದವ್‌ ಠಾಕ್ರೆ ಬಣದ ಶಿವಸೇನಾ ಅಧ್ಯಕ್ಷ ವಿಜಯ್‌ ದೇವಣೆ ಸಹಿತ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಮಹಾರಾಷ್ಟ್ರಕ್ಕೆ ಕಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next