Advertisement

ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆಗೆ ಪ್ರಯತ್ನ: ಸಂಸದೆ ಶೋಭಾ ಕರದ್ಲಾಂಜೆ

12:30 AM Mar 02, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೇಂದ್ರ ಸರಕಾರದ ನೆರವಿಂದ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಎಂದು ಸಂಸದೆ ಶೋಭಾ ಕರದ್ಲಾಂಜೆ ಭರವಸೆ ನೀಡಿದರು.

Advertisement

ಜಿಲ್ಲಾಡಳಿತ, ಕಾರ್ಮಿಕ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಅಗತ್ಯವಿರುವ ಪ್ರಸ್ತಾವನೆ ರಾಜ್ಯ ಸರಕಾರದಿಂದ ಸಲ್ಲಿಕೆಯಾಗಬೇಕು. ಜಿಲ್ಲೆಯಲ್ಲಿನ ಒಟ್ಟು ಕಾರ್ಮಿಕರ ಸಂಖ್ಯೆ ಹಾಗೂ ಇಎಸ್‌ಐ ಆಸ್ಪತ್ರೆಯ ಅಗತ್ಯ ಕುರಿತು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಪ್ರಸ್ತಾವನೆ ಆಧಾರದ ಮೇಲೆ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ ಆಸ್ಪತ್ರೆಯನ್ನು ಮಂಜೂರು ಮಾಡಿಸುವುದಾಗಿ ಹೇಳಿದರು. 

ಪ್ರಸ್ತುತ ರಾಜ್ಯ ಸರಕಾರ 14 ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿದೆ. ಜಿಲ್ಲೆಯಲ್ಲಿ  ಗೇರು ಬೀಜ ಕಾರ್ಖಾನೆ, ಕೃಷಿ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರನ್ನೂ  ಸಹ ಈ ವಲಯಕ್ಕೆ ಸೇರಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸುವ ಬಗ್ಗೆ  ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದರು.

ವಿವಿಧ ವೃತ್ತಿಯಲ್ಲಿ ಸಾಧನೆ ಮಾಡಿದ 12 ಮಂದಿ ಕಾರ್ಮಿಕರಿಗೆ ಶ್ರೇಷ್ಠ ಪುರಸ್ಕಾರ‌ ಹಾಗೂ 96 ಮಂದಿಗೆ ಶ್ರಮ ಸಮ್ಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಜಿ.ಪಂ ಅಧ್ಯಕ್ಷ ದಿನಕರ ಬಾಬು,ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ,ಲಾಲಾಜಿ ಆರ್‌ ಮೆಂಡನ್‌, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ,ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌,ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.
 
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್‌ ಆಚಾರ್‌ ಸ್ವಾಗತಿಸಿ, ಶಿಕ್ಷಕ ಪ್ರಶಾಂತ್‌ ಶೆಟ್ಟಿ ಹಾವಂಜೆ ನಿರ್ವಹಿಸಿದರು.

Advertisement

ಅರ್ಜಿ ಸ್ವೀಕಾರವಾಗಿಲ್ಲ
ಚಿಂದಿ ಆಯುವವರಿಗೆ ಹಾಗೂ ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ಕೊಡ ಮಾಡುವ ವಿಶೇಷ ಪುರಸ್ಕಾರ ಹಾಗೂ ಶ್ರಮ ಸಮ್ಮಾನ ಪ್ರಶಸ್ತಿಗೆ ಯಾವುದೇ ಅರ್ಜಿ ಸ್ವೀಕಾರವಾಗಲಿಲ್ಲ.

31,266 ಅಸಂಘಟಿತ ಕಾರ್ಮಿಕರು
ಜಿಲ್ಲೆಯಲ್ಲಿ 26,922 ಪುರುಷರು ಮತ್ತು 4,344 ಮಳೆಯರು ಸೇರಿದಂತೆ 31,266 ಅಸಂಘಟಿತ ಕಾರ್ಮಿಕರು ನೊಂದಣಿಯಾಗಿದ್ದಾರೆ. ಅವರೆಲ್ಲರಿಗೂ ಇಲಾಖೆಯಿಂದ ಸ್ಮಾರ್ಟ್‌ ಕಾರ್ಡ್‌ ನೀಡಲಾಗಿದೆ.  ವಿವಿಧ ಯೋಜನೆಯಡಿ 12,370 ಫ‌ಲಾನುಭಗಳಿಗೆ 12.49 ಕೋ.ರೂ. ಧನ ಸಹಾಯ ನೀಡಲಾಗಿದೆ. ಸಾಮಾಜಿಕ ಭದ್ರತೆಯಡಿ ಅಪಘಾತದಿಂದ ಮೃತಪಟ್ಟರೆ ಕಾರ್ಮಿಕರ ಕುಟುಂಬಕ್ಕೆ 5 ಲ. ರೂ. ಪರಿಹಾರ ನೀಡಲಾಗುತ್ತದೆ.
– ಸತ್ಯನಾರಾಯಣ, ಕುಂದಾಪುರ ವಲಯದ ಕಾರ್ಮಿಕ ನಿರೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next