Advertisement

ಎನ್‌ಪಿಎಸ್‌ ನ್ಯೂನತೆ ಸರಿಪಡಿಸಲು ಪ್ರಯತ್ನ

06:05 AM Feb 23, 2018 | |

ವಿಧಾನಪರಿಷತ್ತು: ರಾಷ್ಟ್ರೀಯ ಪಿಂಚಣಿ ಯೋಜನೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ 2006ರಿಂದ ಹೊಸ ಪಿಂಚಣಿ ವ್ಯವಸ್ಥೆ ಜಾರಿಯಾಗಿದ್ದು, ಇದರಲ್ಲಿನ ನ್ಯೂನತೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

Advertisement

ಬಿಜೆಪಿಯ ಅರುಣ್‌ ಶಹಾಪೂರ, ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಎಂ.ಎ.ಗೋಪಾಲಸ್ವಾಮಿ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಅವರು, ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಯಾಯಿತು. ಅದರಂತೆ 2004ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 2006ರಿಂದ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ಅನ್ವಯವಾಗಿದೆ. ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಕೆಲ ನ್ಯೂನತೆಗಳ ಬಗ್ಗೆ ದೂರುಗಳು ಬಂದಿವೆ. ಆದರೆ ಈಗಾಗಲೇ ಜಾರಿಯಾಗಿ 12 ವರ್ಷ ಕಳೆದಿರುವುದರಿಂದ ಹಳೆಯ ಪಿಂಚಣಿ ವ್ಯವಸ್ಥೆಗೆ ಹೋಗುವುದು ಪರಿಹಾರವಲ್ಲ ಎಂದು ಹೇಳಿದರು.

ಸರ್ಕಾರ ನೌಕರರೊಂದಿಗಿದೆ: ಪಿಂಚಣಿಗೆ ನೌಕರರ ಪಾಲು ಮಾತ್ರವಲ್ಲದೇ ರಾಜ್ಯ ಸರ್ಕಾರವೂ ಶೇ.10 ಪಾಲು ನೀಡುತ್ತದೆ. ಆರಂಭಿಕ ಹಂತದಲ್ಲಿ ಒಂದಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಹಾಲಿ ಯೋಜನೆಯಲ್ಲೇ ನ್ಯೂನತೆ ಸರಿಪಡಿಸಲು ಪ್ರಯತ್ನಿಸಲಾಗುವುದು. ಅಹವಾಲು ಆಲಿಸಿ ಬಗೆಹರಿಹಸಲು ಗಮನ ಹರಿಸಲಾಗುವುದು. ರಾಜ್ಯ ಸರ್ಕಾರ ನೌಕರರೊಂದಿಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಅರುಣ್‌ ಶಹಾಪುರ, ಹೊಸ ಪಿಂಚಣಿ ವ್ಯವಸ್ಥೆಯಿಂದ ಸರ್ಕಾರಿ ನೌಕರರಿಗೆ ಹಳೆಯ ವ್ಯವಸ್ಥೆಯ ಯಾವುದೇ ಸೌಲಭ್ಯ ಸಿಗದಂತಾಗಿದೆ. ನಿವೃತ್ತಿ ಮತ್ತು ಮರಣ ಹೊಂದಿದ ನೌಕರರಿಗೆ ಈ ವ್ಯವಸ್ಥೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ತೃಪ್ತಿ ಇದೆಯೇ ಎಂದು ಪ್ರಶ್ನಿಸಿದರು. ಜೆಡಿಎಸ್‌ನ ಬಸವರಾಜ ಹೊರಟ್ಟಿ, ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಇಡೀ ದೇಶಕ್ಕೆ ಮಾದರಿಯಾಗುವ ನಿಲುವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಮುಂಬಡ್ತಿಗೆ ಆದ್ಯತೆ
ವಿಧಾನ ಪರಿಷತ್ತು
: ಬಡ್ತಿ ಮೀಸಲಾತಿ ವಿಚಾರ ಸಂಬಂಧ ಪ್ರಸ್ತಾವಕ್ಕೆ ಮಾರ್ಚ್‌ 15ರೊಳಗೆ ಅಂಕಿತ ಹಾಕುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದ್ದು, ಈ ಪ್ರಕ್ರಿಯೆಯಿಂದಾಗಿ ಇತರೆ ವರ್ಗದವರಿಗೆ ಬಡ್ತಿ ನೀಡಿಕೆಗೂ ಹಿನ್ನಡೆಯಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ಜೆಡಿಎಸ್‌ನ ಅಪ್ಪಾಜಿಗೌಡ ಪರವಾಗಿ ರಮೇಶ್‌ ಬಾಬು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು, ಬಡ್ತಿ ಮೀಸಲಾತಿ ಸಂಬಂಧ ರಾಷ್ಟ್ರಪತಿಯವರು ಕೈಗೊಳ್ಳುವ ನಿಲುವಿನ ತರುವಾಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಿವೃತ್ತಿ ಅಂಚಿನಲ್ಲಿರುವವರಿಗೂ ಬಡ್ತಿ ಕಲ್ಪಿಸಲುಆದ್ಯತೆ ನೀಡಲಾಗುವುದು. ನ್ಯಾಯಯುತ  ಮುಂಬಡ್ತಿ ಕಲ್ಪಿಸಲು ಬದಟಛಿವಾಗಿದ್ದು, ಈ ಬಗ್ಗೆ ಆತಂಕ ಬೇಡ ಎಂದು ಹೇಳಿದರು

ದಿನಗೂಲಿ ನೌಕರರಿಗೂ ಭತ್ಯೆಗೆ ಬದ್ಧ
ವಿಧಾನಪರಿಷತ್ತು
: ಸರ್ಕಾರದ ವಿವಿಧ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ವಿವಿಧ ಭತ್ಯೆ ನೀಡುವ ಚಿಂತನೆಯಿದ್ದು, ಈ ಬಗ್ಗೆ ನಿಯಮಾವಳಿ ರೂಪಿಸಬೇಕಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು, ದಿನಗೂಲಿ ನೌಕರರಿಗೂ ನಾನಾ ಭತ್ಯೆ ಸಿಗುವ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಸೌಲಭ್ಯ ಸಿಗಲಿದೆ. ವಿಮೆ ಮತ್ತು ಪಿಂಚಣಿ ಸೇವೆಯನ್ನು ನೇರವಾಗಿ ಕಲ್ಪಿಸಲು ಅವಕಾಶವಿಲ್ಲದ ಕಾರಣ ಪ್ರತ್ಯೇಕವಾಗಿ ಈ ಸೌಲಭ್ಯ ಕಲ್ಪಿಸಲು ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next