Advertisement

ಚಾಲಕನಿಂದ ಆತ್ಮಹತ್ಯೆಗೆ ಯತ್ನ: ಅಧಿಕಾರಿಗಳ ವಿರುದ್ಧ ಧರಣಿ

11:43 AM Sep 20, 2017 | Team Udayavani |

ಬೆಂಗಳೂರು: “ಶಾಂತಿನಗರದ ಬಿಎಂಟಿಸಿ ಡಿಪೋ-2ರ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.’ ಎಂದು ಆರೋಪಿಸಿ ಬಸ್‌ ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿಗಳ ವರ್ತನೆ ಖಂಡಿಸಿ ಮಂಗಳವಾರ ಬೆಳಿಗ್ಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟಿಸಿದರು. ಪರಿಣಾಮ ಕೆಲಹೊತ್ತು ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. 

Advertisement

ಡಿಪೋ-2 ಬಸ್‌ ಚಾಲಕ ಮಧು (34) ಘಟಕದ ಆವರಣದಲ್ಲೇ ಸೋಮವಾರ ರಾತ್ರಿ ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ನೌಕರರು ಮಂಗಳವಾರ ಬೆಳಗ್ಗೆ ಘಟಕಕ್ಕೆ ಆಗಮಿಸಿ, ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದರು. ಘಟಕದ ವ್ಯವಸ್ಥಾಪಕ ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 

ಆಗ ಸ್ಥಳಕ್ಕೆ ಧಾವಿಸಿದ ಬಿಎಂಟಿಸಿ ಹಿರಿಯ ಅಧಿಕಾರಿಗಳು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ನೌಕರರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಿಂತಿರುಗಿದರು. ಪ್ರತಿಭಟನೆಯಿಂದ ಸುಮಾರು 120 ಬಸ್‌ಗಳು ರಸ್ತೆಗಿಳಿಯಲಿಲ್ಲ. ಬೆಳಗ್ಗೆ 11.30ರವರೆಗೂ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು. 

ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಮಧು ಹಬ್ಬದ ಪ್ರಯುಕ್ತ ಸೆ. 19ರಂದು ರಜೆಗಾಗಿ ಘಟಕದ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಆದರೆ, ರಜೆ ನಿರಾಕರಿಸಿ ಎಂದಿನಂತೆ ಸೋಮವಾರ 2ನೇ ಪಾಳಿಯ ಕೆಲಸಕ್ಕೆ ಹಾಜರಾಗಲು ಸೂಚಿಸಿದ್ದರು. ಅಲ್ಲದೆ, ಅಧಿಕಾರಿಗಳು ಕೆಲಹೊತ್ತು ಕಾಯಿಸಿ ಕರ್ತವ್ಯ ನೀಡಿದ್ದಾರೆ. ಇದರಿಂದ ಮನನೊಂದು ಮಧು ರಾತ್ರಿ ಘಟಕದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಬಿಎಂಟಿಸಿ ನೌಕರರ ಸಂಘದ ಮುಖಂಡರು ಆರೋಪಿಸಿದರು. 

ತಡವಾಗಿ ಕರ್ತವ್ಯಕ್ಕೆ ಬಂದಿದ್ದ ಚಾಲಕ ಮಧು: ಚಾಲಕ ಮಧು ಸೋಮವಾರ ಮಧ್ಯಾಹ್ನ 2 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ಅರ್ಧ ತಾಸು ತಡವಾಗಿ ಬಂದಿದ್ದರು. ನಿಗದಿತ ಸಮಯಕ್ಕೆ ಬಸ್‌ ಹೊರಡಬೇಕಿದ್ದರಿಂದ ಆ ಬಸ್‌ಗೆ ಬೇರೆ ಚಾಲಕನನ್ನು ನಿಯೋಜಿಸಲಾಗಿತ್ತು. ಹಾಗಾಗಿ, ಮಧುಗೆ ಬೇರೆ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು ಎಂಬುದು ಅಧಿಕಾರಿಗಳ ಸಮಜಾಯಿಷಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next