ಬೆಂಗಳೂರು: ಹಣಕಾಸು ವ್ಯವಹಾರದ ದಾಖಲೆಗಳ ಪರಿಶೀಲನೆಗೆ ತೆರಳಿದ್ದ ವಾಣಿಜ್ಯ ತೆರಿಗೆ ಇಲಾಖೆಯ ನಾಲ್ವರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಬೆಂಗಳೂರು ಅರಮನೆ ಮೈದಾನದ ಶೀಷ ಮಹಲ್‌ನ ಮ್ಯಾನೇಜರ್ ಅನೂಜ್ ಮ್ಯಾಥ್ಯೂ ವರ್ಗೀಸ್ ಎಂಬಾತನನ್ನು ಹ್ರೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ವಾಣಿಜ್ಯ ತೆರಿಗೆ ಉಪ ಆಯುಕ್ತ ಬಾಬು ಜಿಡ್ಡಿಮನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದು, ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶೀಷ ಮಹಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ ಸಂಬಂಧಧ ಲೆಕ್ಕ ದಾಖಲೆ ಪರಿಶೀಲಿಸಲು ಬುಧವಾರ ಸಂಜೆ 5.30ರ ಸುಮಾರಿಗೆ ಬೆಂಗಳೂರು ದಕ್ಷಿಣ ವಿಭಾಗದ ವಾಣಿಜ್ಯ ತೆರಿಗೆ ಆಯುಕ್ತ ಚಂದ್ರಯ್ಯ ಆರ್.ಎಚ್ ನೇತೃತ್ವದ ತಂಡ ತೆರಳಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 1 ಲಕ್ಷ ನಗದು ಇದ್ದ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಶೀಷಮಹಲ್ ಮ್ಯಾನೇಜರ್ ಅನೂಜ್ ಮ್ಯಾಥ್ಯೂ ವರ್ಗೀಸ್, ಟ್ವಿಂಕಲ್ ಸ್ಯಾಮ್ಯುಯಲ್ ಮತ್ತಿತರರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿ ತಳ್ಳಾಡಿದ್ದಾರೆ. ಜತೆಗೆ ಕ್ಯಾಶ್ ಇದ್ದ ಬ್ಯಾಗ್‌ಅನ್ನು ಮೂರನೇ ವ್ಯಕ್ತಿಗೆ ಕೊಟ್ಟು ಹೊರಗೆ ಕಳುಹಿಸಿಕೊಟ್ಟಿದ್ದಾರೆ. ತೆರಿಗೆ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದು, ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದರು.
ಈ ಮಧ್ಯೆ ನಗದು ಇದ್ದ ಕ್ಯಾಶ್ ಬ್ಯಾಗ್‌ಅನ್ನು ಅಲ್ಲಿನ ಸಿಬ್ಬಂದಿ ಮರಳಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ತಂದೊಪ್ಪಿಸಿದ್ದಾರೆ. ನಂತರ ಅಲ್ಲಿನ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳು ತೆರಳಿದ್ದಾರೆ.
ಪರಿಶೀಲನೆ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ತಳ್ಳಾಡಿದ ಕುರಿತು ವಾಣಿಜ್ಯ ತೆರಿಗೆ ಇಲಾಖೆಗಳು ನೀಡಿದ ದೂರಿನ ಅನ್ವಯ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಟ್ವಿಂಕಲ್ ಸ್ಯಾಮ್ಯುಯಲ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು “ಉದಯವಾಣಿಗೆ’ ತಿಳಿಸಿದ್ದಾರೆ.