ಹುಬ್ಬಳ್ಳಿ: ಹತ್ಯೆಯಾದ ನೇಹಾ ಹಿರೇಮಠ ತಂದೆ ಹಾಗೂ ಪಾಲಿಕೆ ಸದಸ್ಯ ನಿರಂಜನಯ್ಯ ಹೀರೆಮಠ ಆಪ್ತ ಸಹಾಯಕನ ಅಪಹರಣಕ್ಕೆ ಮೂವರು ಯತ್ನಿಸಿದ್ದರೆಂದು ಆರೋಪಿಸಿ ಇಲ್ಲಿನ ಘಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂಜನಯ್ಯನ ಆಪ್ತ ಸಹಾಯಕ ಈರಣ್ಣ ಉರ್ಫ್ ವಿಜಯ ಅಪಹರಣಕ್ಕೆ ಬುಧವಾರ ಬೆಳಗ್ಗೆ ವಾಳ್ವೇಕರ ಗಲ್ಲಿಯ ಗಜಾನನ ಬ್ಯಾಂಕ್ ಎದುರು ಯತ್ನಿಸಿದ್ದಾರೆಂದು ಆರೋಪಿಸಿ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಈರಣ್ಣ ಬೆಳಗಿನ ಜಾವ 5:00 ಗಂಟೆ ಸುಮಾರಿಗೆ ಬೀದಿ ದೀಪ ಬಂದ್ ಮಾಡಲು ಹೋಗಿದ್ದ. ಈ ವೇಳೆ ಕಾರು ಹತ್ತುವಂತೆ ಮೂರು ವ್ಯಕ್ತಿಗಳು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಭಯಗೊಂಡು ಮೊಬೈಲ್‌ನಿಂದ ವಿಡಿಯೋ ಮಾಡಲು ಮುಂದಾಗುತ್ತಿದ್ದಂತೆಯೇ ಅವರು ಅಲ್ಲಿಂದ ಕಾಲ್ಕಿತ್ತರೆಂದು ಹೇಳಲಾಗುತ್ತಿದೆ. ನಂತರ ಈರಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಅಪಹರಿಸಲು ಬಂದವರು ಯಾರು? ಯಾವ ಕಾರಣಕ್ಕೆ ಯತ್ನಿಸಿದ್ದರು ಎಂಬ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹು-ಧಾ. ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಘಂಟಿಕೇರಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ಕೊಟ್ಟಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ