ಮಂಗಳೂರು: ಅತ್ತಾವರದಲ್ಲಿ ರುವ ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸವಲತ್ತುಗಳಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವನ್ನು ಶುಕ್ರವಾರ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಕೆಲವು ದಶಕಗಳಲ್ಲಿ ಕ್ಯಾನ್ಸರ್, ಹೃದ್ರೋಗ ಇತ್ಯಾದಿ ತೀವ್ರ ಪ್ರಮಾಣ ದಲ್ಲಿ ಹೆಚ್ಚುತ್ತಿದ್ದು, ಜನರು ಪ್ರಾಣ ಕಳೆದು ಕೊಳ್ಳುತ್ತಿರುವುದು ಕಳವಳಕಾರಿ. ಈ ಬಗ್ಗೆ ನೂತನ ಆವಿಷ್ಕಾರ, ತಂತ್ರಜ್ಞಾನಗಳ ಆಗಮನ ಸ್ವಾಗತಾರ್ಹ ಎಂದರು.
ಕೆಎಂಸಿ ಸಾಕಷ್ಟು ಇತಿಹಾಸ ಇರುವ ಸಂಸ್ಥೆ, ದೇಶದೆಲ್ಲೆಡೆ ಪ್ರಸಿದ್ಧವಾಗಿದ್ದು, ಆರೋಗ್ಯ ಸೇವೆಯಲ್ಲಿ ಮುಂದಿರುವುದು ಶ್ಲಾಘನೀಯ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಹಲವು ದಶಕಗಳಿಂದ ಕೆಎಂಸಿ ಈ ಭಾಗದಲ್ಲಿ ನೀಡುತ್ತಿರುವ ಆರೋಗ್ಯ ಸೇವೆ ಸ್ಮರಣೀಯವಾದದ್ದು, ಪ್ರಸ್ತುತ ಕ್ಯಾನ್ಸರ್ ಚಿಕಿತ್ಸೆಗೆ ಆಧುನಿಕ ಯಂತ್ರೋಪಕರಣಗಳನ್ನು ಆರಂಭಿಸಿದ್ದು ಉತ್ತಮ ಕೆಲಸ ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮೆಡಿಕಲ್ ಟೂರಿಸಂ ಮೂಲಕ ರೋಗಿಗಳನ್ನು ಸೆಳೆಯಬಹುದಾಗಿದ್ದು, ಸರಕಾರ ಗಮನ ಹರಿಸಬೇಕು ಎಂದರು.
ಮಾಹೆ ಪ್ರೊ ಚಾನ್ಸಲರ್ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಡಿಎಚ್‌ಒ ಡಾ| ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕಿ ಡಾ| ಜೆಸಿಂತಾ, ಮಾಹೆ ಉಪಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಮಾಹೆ ಮಂಗಳೂರು ಕ್ಯಾಂಪಸ್‌ನ ಸಹಉಪಕುಲಪತಿ ಡಾ| ದಿಲೀಪ್ ಜಿ. ನಾೖಕ್, ಕೆಎಂಸಿ ಮಂಗಳೂರಿನ ಡೀನ್ ಡಾ| ಬಿ. ಉನ್ನಿಕೃಷ್ಣನ್, ಮಾಹೆ ಟೀಚಿಂಗ್ ಹಾಸ್ಪಿಟಲ್ಸ್‌ನ ಸಿಒಒ ಡಾ| ಆನಂದ್ ವೇಣುಗೋಪಾಲ್, ಅತ್ತಾವರ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಜಾನ್ ರಾಮಪುರಂ ಇದ್ದರು. ರೇಡಿಯೇಶನ್ ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ| ಎಂ.ಎಸ್. ಅತಿಯಮಾನ್ ಸ್ವಾಗತಿಸಿದರು.
ಕ್ಯಾನ್ಸರ್ ಕೇರ್ ಸೆಂಟರ್ ವಿಶೇಷತೆ
ನೂತನ ಕ್ಯಾನ್ಸರ್ ಸಮಗ್ರ ಆರೈಕೆ ಕೇಂದ್ರದಲ್ಲಿ ರೇಡಿಯೇಶನ್ ಆಂಕಾಲಜಿ, ಮೆಡಿಕಲ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ಪೀಡಿಯಾಟ್ರಿಕ್ ಆಂಕಾಲಜಿ, ಆಂಕೊ-ಪ್ಲಾಸ್ಟಿಕ್ ಸರ್ಜರಿ ಹಾಗೂ ಪೈನ್ ಆ್ಯಂಡ್ ಪಾಲಿಯೇಟಿವ್ ಕೇರ್ ಒಂದೇ ಸೂರಿನಡಿ ದೊರೆಯಲಿವೆ. ಎಲ್ಲ ಕ್ಯಾನ್ಸರ್ ಸಂಬಂಧಿ ಸೇವೆಗಳ ಸಮಗ್ರ ಕೇಂದ್ರ ಇದು. ಡೇ ಕೇರ್ ಸೌಲಭ್ಯ ಇದೆ. ಅತ್ಯಾಧುನಿಕ -ನಿಖರವಾದ ಇಮೇಜಿಂಗ್ ತಂತ್ರಜ್ಞಾನ ಬಳಸಿ ಚಿಕಿತ್ಸೆ ಉತ್ಕೃಷ್ಟಗೊಳಿಸುವಂತೆ ಟ್ರೂಬೀಮ್ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ.