ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲೆಲ್ಲಾ ಹಿಂದೂಗಳ ಮೇಲೆ, ಯಾತ್ರಾರ್ಥಿಗಳ ಮೇಲೆ ಹಲ್ಲೆ, ಬೆದರಿಕೆ ಪ್ರಕರಣಗಳು ನಡೆಯುತ್ತವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಹೊಸಪೇಟೆಯಲ್ಲಿ ಅಯೋಧ್ಯೆಯ ಯಾತ್ರಿಗಳಿಗೆ ಬೆದರಿಕೆ ಹಾಕಿದ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೀಗಾಗುತ್ತದೆ ಎಂದರು.
ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅಂತಹವರು ತುಷ್ಟೀಕರಣಕ್ಕಾಗಿ, ಮತ ಬ್ಯಾಂಕ್ ಗಾಗಿ ಉತ್ತೇಜನ ಕೊಡುತ್ತಾರೆ. ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಬೇಕು. ಸರ್ಕಾರದ ಸಡಲಿಕೆಯಿಂದ ಹೀಗೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಇದೆ, ನಾವು ಏನು ಮಾಡಿದರೂ ನಡೆಯುತ್ತದೆ ಎನ್ನುವುದು ಅಪರಾಧಿಗಳ ಮನಸ್ಥಿತಿ ಆಗಿದೆ ಎಂದರು.
ವಿಧಾನ ಮಂಡಲದಲ್ಲಿ ಕೇಂದ್ರ ಸರ್ಕಾರದ ವಿರುದ್ದ ನಿರ್ಣಯ ಅತ್ಯಂತ ದುರ್ದೈವದ ಸಂಗತಿ. ಸಚಿವ ಎಚ್.ಕೆ. ಪಾಟೀಲ್‌ರಂತಹ ಹಿರಿಯರು ಸಿಎಂ ಒತ್ತಡದಿಂದ ಹೀಗೆ ಮಾಡಿದ್ದು ಘೋರ ದುರಂತ. 15ನೆ ಹಣಕಾಸು ಆಯೋಗದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರವಿತ್ತು. ತಮ್ಮ ವಿಫಲತೆಗಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಸುಳ್ಳುಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ದುಡ್ಡು ಇಲ್ಲದ್ದಕ್ಕೆ ದೇವಾಲಯಗಳ ಮೇಲೆ ಕಣ್ಣು ಹಾಕುತ್ತಿದ್ದಾರೆ. ತಾಕತ್ತಿದ್ದರೆ ಚರ್ಚ್, ಮಸೀದಿಯ ಹತ್ತು ಪರ್ಸೆಂಟ್ ಹಣ ತೆಗೆದುಕೊಳ್ಳಲಿ. ಹಿಂದೂ ವಿರೋಧಿ ಎನ್ನುವುದನ್ನು ಹೆಜ್ಜೆಹೆಜ್ಜೆಗೂ ತೋರಿಸುತ್ತಿದ್ದಾರೆ. ವಕ್ಫ್ ಹೆಸರಲ್ಲಿ ಎಲ್ಲಾ ಆಸ್ತಿ ಹೊಡೆಯುತ್ತಿದ್ದಾರೆ. ಅದನ್ನು ತಡೆಯುವ ತಾಕತ್ತು ಸರ್ಕಾರಕ್ಕಿಲ್ಲ. ಇದರ ವಿರುದ್ಧ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಅಪ್ರಬುದ್ಧತೆ ವರ್ತನೆಗೆ ಬೇಸತ್ತು ಅನೇಕ ಕಾಂಗ್ರೆಸ್ ನಾಯಕರು ತಾವಾಗಿಯೇ ಬಿಜೆಪಿಗೆ ಬರುತ್ತಿದ್ದಾರೆ ಹೊರತು, ಇಂಡಿಯಾ ಒಕ್ಕೂಟ ಒಡೆಯುವ ಯಾವ ಯತ್ನವನ್ನೂ ನಾವು ಮಾಡುತ್ತಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಯಾವ ಕಾರಣಕ್ಕೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಲೋಕಸಭೆ ಚುನಾವಣೆ ಸ್ಥಾನ ಹಂಚಿಕೆಯ ಯಾವ ತೀರ್ಮಾನವೂ ಆಗಿಲ್ಲ ಎಂದರು.
ಪಕ್ಷ ಹೈಕಮಾಂಡ್ ಬಿಜೆಪಿ-ಜೆಡಿಎಸ್ ರಾಜ್ಯ ಘಟಕಗಳೊಂದಿಗೆ ಚರ್ಚಿಸಿ ಸ್ಥಾನ ಹಂಚಿಕೆ ಅಂತಿಮಗೊಳಿಸಲಿದೆ. ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿ ಯೊಂದಿಗೆ ಇರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.