ಪಶ್ಚಿಮ ಬಂಗಾಲದಲ್ಲಿ ತನಿಖಾ ಸಂಸ್ಥೆಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳೇನೇ ಇರಲಿ, ತನಿಖಾ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವುದು ಆಯಾಯ ರಾಜ್ಯ ಸರ ಕಾರದ ಹೊಣೆಗಾರಿಕೆಯಾಗಿದೆ. ಅದರಲ್ಲೂ ಭ್ರಷ್ಟಾಚಾರ, ಅಕ್ರಮಗಳಂತಹ ಪ್ರಕರಣಗಳಲ್ಲಿ ಆರೋಪಿಗಳ ತನಿಖೆಗೆ ಮುಂದಾಗುವ ಉನ್ನತ ತನಿಖಾ ಸಂಸ್ಥೆಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವುದು ಸ್ಥಳೀಯ ಪೊಲೀಸರ ಆದ್ಯ ಕರ್ತವ್ಯ.
ಹೀಗಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ, ಶೋಧ ಕಾರ್ಯಾಚರಣೆ ಕೈಗೊಂಡ ಸಂದರ್ಭಗಳಲ್ಲಿ ಈ ಸಂಸ್ಥೆಗಳ ಅಧಿಕಾರಿಗಳ ವಾಹನ ಗಳ ಮೇಲೆ ಕಲ್ಲುತೂರಾಟ ನಡೆಸಿ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸುವ ಘಟನೆಗಳು ರಾಜ್ಯವೊಂದರಲ್ಲಿ ಪದೇಪದೆ ಮರುಕಳಿಸುತ್ತವೆ ಎಂದಾದರೆ ಅದು ನಿಜಕ್ಕೂ ಕಳವಳಕಾರಿ ವಿದ್ಯಮಾನವೇ ಸರಿ.
ಪಡಿತರ ವಿತರಣೆಯಲ್ಲಾಗಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜನವರಿ ಆರಂಭದಲ್ಲಿ ಪಶ್ಚಿಮ ಬಂಗಾಲದ ಸಂದೇಶ್‌ಖಾಲಿಯಲ್ಲಿನ ಶಂಕಿತರ ಮೇಲೆ ದಾಳಿ ನಡೆಸಲು ಮುಂದಾದಾಗ ಅವರ ಮೇಲೆ ನೂರಾರು ಸಂಖ್ಯೆಯಲ್ಲಿದ್ದ ಸ್ಥಳೀಯರ ಗುಂಪೊಂದು ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸದಂತೆ ಅವರನ್ನು ತಡೆದಿದ್ದರು. ಈ ವೇಳೆ ಇ.ಡಿ. ಅಧಿಕಾರಿ ಗಳು ಗಾಯಗೊಂಡಿದ್ದರು. ಆ ಬಳಿಕ ಅಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದ ಪರಿಶೀಲನೆಗಾಗಿ ತೆರಳಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಗೂ ತಡೆಯೊಡ್ಡಲಾಗಿತ್ತು. ಈ ಘಟನೆ ಕುರಿತಂತೆ ರಾಜಕೀಯ ವಾಕ್ಸಮರ ತೀವ್ರಗೊಂಡಿ ರುವ ನಡುವೆಯೇ 2022ರ ಡಿಸೆಂಬರ್‌ನಲ್ಲಿ ಮೇದಿನಿಪುರ ಜಿಲ್ಲೆಯ ಭೂಪತಿ ನಗರದಲ್ಲಿನ ಕಚ್ಚಾ ಮನೆಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಪ್ರಕರಣದ ಸಂಚುಕೋರರೆಂದು ಗುರುತಿಸಲಾಗಿರುವ ಆರೋಪಿಗಳನ್ನು ಬಂಧಿ ಸಲು ಗುರುವಾರ ತೆರಳಿದ್ದ ವೇಳೆ ಅವರ ಮೇಲೂ ದಾಳಿ ನಡೆಸಲಾಗಿದೆ. ಎನ್‌ಐಎ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಅವರ ಕಾರ್ಯಾಚರಣೆಗೆ ಅಡ್ಡಿಪಡಿಸಲಾಗಿದೆ. ಇದರ ಹೊರತಾಗಿಯೂ ಎನ್‌ಐಎ ಅಧಿಕಾರಿಗಳು ಈರ್ವರು ಆರೋಪಿಗಳನ್ನು ಬಂಧಿಸಿದ್ದರು. ಇಲ್ಲೂ ಓರ್ವ ಅಧಿಕಾರಿ ಗಾಯಗೊಂಡಿದ್ದಾರೆ.
ಈ ಘಟನೆಯ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೆ ರಾಜಕೀಯ ಕೆಸರೆರಚಾಟ ಭುಗಿಲೆದ್ದಿದೆ. ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಈ ಘಟನೆಗಳು ನಡೆದಿರುವುದರಿಂದ ಎರಡೂ ಪಕ್ಷಗಳು ಈ ವಿಷಯ ವಾಗಿ ಪರಸ್ಪರ ದೋಷಾರೋಪಣೆಯಲ್ಲಿ ನಿರತವಾಗಿವೆ. ರಾಜಕೀಯ ಆರೋಪ- ಪ್ರತ್ಯಾರೋಪಗಳೇನೇ ಇರಲಿ, ರಾಜ್ಯದ ಆಡಳಿತಾರೂಢ ಸರಕಾರದ ನಡೆ ಮಾತ್ರ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿನ ಟಿಎಂಸಿ ಸರಕಾರ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ. ಮತ್ತು ಎನ್‌ಐಎ ರಾಜ್ಯದಲ್ಲಿನ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ. ಮಾತ್ರವಲ್ಲದೆ ಜನರನ್ನು ಎತ್ತಿಕಟ್ಟಿ ಈ ಸಂಸ್ಥೆಗಳ ವಿರುದ್ಧ ಛೂ ಬಿಡುವ ಕಾರ್ಯದಲ್ಲಿ ನಿರತವಾಗಿರುವುದು ತೀರಾ ಖಂಡನೀಯ. ರಾಜ್ಯ ಸರಕಾರ ವೊಂದು ಕಾನೂನು ಭಂಜಕರ ರಕ್ಷಣೆಗೆ ಮುಂದಾಗಿರುವುದು ಅಕ್ಷಮ್ಯ. ನ್ಯಾಯ-ಅನ್ಯಾಯದ ತೀರ್ಮಾನ ಮಾಡಲು ನ್ಯಾಯಾಲಯಗಳಿವೆ. ಒಂದು ವೇಳೆ ಕೇಂದ್ರ ಸರಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆ ಗಳನ್ನು ಬಳಸಿಕೊಳ್ಳುತ್ತಿದೆ ಎಂದಾದಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಟಿಎಂಸಿಗೆ ಮುಕ್ತ ಅವಕಾಶವಿದೆ. ಇದನ್ನು ಬಿಟ್ಟು ಜನರು ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.