Advertisement

ರೈತರಿಗೆ ಕೊಡಬೇಕಾದ ಹಣಕೇಳಿದ್ದಕ್ಕೆ ರೌಡಿಗಳಿಂದ ಹಲ್ಲೆ

11:06 AM Oct 26, 2017 | |

ಮಹದೇವಪುರ: ಜಮೀನು ವಿವಾದದ ಸಂಧಾನಕ್ಕೆ ತೆರಳಿದ್ದ ಕಾಂಗ್ರೆಸ್‌ನ ಜಿಲ್ಲಾ ಪಂಚಾಯಿತಿ ಸದಸ್ಯನ ಮೇಲೆ ರೌಡಿಗಳು
ಹಲ್ಲೆ ನಡೆಸಿರುವ ಘಟನೆ ಆವಲಹಳ್ಳಿ ಪೊಲೀಸ್‌ ಠಾಣೆಯ ಕಿತ್ತನಗನೂರು ಸಮೀಪ ನಡೆದಿದೆ. ಆವಲಹಳ್ಳಿ ಜಿ.ಪಂ ಸದಸ್ಯ ಕೆ.ವಿ. ಜಯರಾಮ್‌ ಹಲ್ಲೆಗೊಳಗಾ ದವರು. ಘಟನೆಯಲ್ಲಿ ಜಯರಾವ್‌ರ ತಲೆಗೆ ಗಂಭೀರ ಗಾಯವಾಗಿದ್ದು, ರಾಮ ಮೂರ್ತಿ ನಗರದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕಿತ್ತಗನೂರು ಗ್ರಾಮಸ್ಥರಿಂದ ಜಮೀನು ಖರೀದಿಸಿದ್ದ ಎಸ್‌ಎಲ್‌ವಿ ಚಂದ್ರಶೇಖರ್‌ ಎಂಬಾತ, ರೈತರಿಗೆ ಹಣ ನೀಡದೆ ವಂಚಿಸಿದ್ದ. ಅಲ್ಲದೆ ಗ್ರಾಮಸ್ಥರಿಂದ ಖರೀದಿಸಿದ್ದ ಜಮೀನಿನ ಸುತ್ತ ಕಾಂಪೌಡ್‌ ಕಟ್ಟಿಕೊಳ್ಳುವ ಸಲುವಾಗಿ ಬುಧವಾರ ಗುದ್ದಲಿ ಪೂಜೆ ನೆರವೇರಿಸಲು ಕಿತ್ತಗನೂರಿಗೆ ತನ್ನ ಇತರೆ ಸಹಚರರೊಂದಿಗೆ ಬಂದಿದ್ದ. ಈ ವಿಚಾರ ತಿಳಿದ ಸ್ಥಳೀಯ ಗ್ರಾಮಸ್ಥರು ಚಂದ್ರಶೇಖರ್‌ ಜತೆ ಮಾತುಕತೆ
ನಡೆಸುವಂತೆ ಜಿ.ಪಂ ಸದಸ್ಯ ಕೆ.ವಿ.ಜಯರಾಮ್‌ರನ್ನು ಕರೆದೊಯ್ದಿದ್ದರು. 

ಈ ವೇಳೆ ರೈತರು ಮತ್ತು ಚಂದ್ರಶೇಖರ್‌ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ಕೂಡ ನಡೆದಿದೆ. ಆಗ ಜಯರಾಮ್‌
ಗ್ರಾಮಸ್ಥರ ಪರವಾಗಿ ಮಾತನಾಡಲು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಕೆರಳಿದ ರೌಡಿಶೀಟರ್‌ ವಾಲೆ ಮಾರುತಿ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೆಲ ಹೊತ್ತಿನಲ್ಲೇ ಹತ್ತಾರು ಮಂದಿ ಸಹಚರರ ಜತೆ ಮಾರಕಾಸ್ತ್ರಗಳೊಂದಿಗೆ ಸ್ಥಳಕ್ಕೆ ಬಂದ ವಾಲೆ ಮಾರುತಿ ಸಹೋದರ ವಾಲೆ ಮಂಜ ಕಬ್ಬಿಣದ ಸಲಾಕೆಯಿಂದ ಜಿ.ಪಂ ಸದಸ್ಯ ಜಯರಾಮ್‌ ತಲೆಗೆ ಹಲ್ಲೆ ಮಾಡಿ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಕೆಳಗೆ ಬಿದ್ದು ತೀವ್ರರಕ್ತಸ್ರಾವದಿಂದ ನರಳುತ್ತಿದ್ದ ಜಯರಾಮ್‌ ಅವರನ್ನು
ಕೂಡಲೇ ಸ್ಥಳೀಯ ಗ್ರಾಮಸ್ಥರು ಜಯರಾಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ವಾಲೆ ಮಂಜನಿದ್ದ ಕಾರಿನತ್ತ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ವಾಹನವನ್ನು ಜಖಂಗೊಳಿಸಿದ್ದಾರೆ. ಆದರೆ
ತನ್ನಲ್ಲಿದ್ದ ಪಿಸ್ತೂಲ್‌ ತೋರಿಸಿ ಗ್ರಾಮಸ್ಥರನ್ನು ಬೆದರಿಸಿದ ಮಂಜ, ಫಾರ್ಚೂನರ್‌ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಶಿವಕುಮಾರ್‌ ತಿಳಿದ್ದಾರೆ. ಎಸ್‌ಎಲ್‌ವಿ ಶೇಖರ್‌ ವಿರುದ್ಧ ಈ ಹಿಂದೆಯೇ ಹಲವು ಪ್ರಕರಣಗಳಿದ್ದು ಚೀಟಿ ವ್ಯವಹಾರ ನಡೆಸಿ ಜನರಿಗೆ ವಂಚಿಸಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.

ಘಟನೆ ಸಂಬಂಧ ಎಸ್‌ಎಲ್‌ವಿ ಚಂದ್ರಶೇಖರ್‌ ಮತ್ತು ವಾಲೆ ಮಂಜ, ವಾಲೆ ಮಾರುತಿ ಸೇರಿದಂತೆ ಇತರರ ವಿರುದ್ಧಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು, ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next