ಕಾಪು: ಮಲ್ಲಾರು ಗ್ರಾಮದ ಕುಡ್ತಿಮಾರ್ ಕೈರುನ್ನಿಸಾ ಕಾಟೇಜ್ ಬಳಿಯ ಅಕ್ರಮ ಕಸಾಯಿಖಾನೆಗೆ ಗುರುವಾರ ದಾಳಿ ನಡೆಸಿದ ಕಾಪು ಪೊಲೀಸರು ಇಬ್ಬರನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಟಪಾಡಿ ಮೂಡಬೆಟ್ಟು ಬಳಿಯಿಂದ ಜಾನುವಾರು ಕಳವು ಮಾಡಿ ಕಾರಿನಲ್ಲಿ ತಂದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾಪು ಪೊಲೀಸ್ ಠಾಣಾಧಿಕಾರಿ ರಾಜಶೇಖರ್ ಬಿ. ಸಾಗನೂರು ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಉದ್ಯಾವರ ಗುಡ್ಡೆಯಂಗಡಿ ನಿವಾಸಿ ಮೊಹಮ್ಮದ್ ತಾವಾ (35), ಮೂಳೂರು ನಿವಾಸಿ ಮೊಯಿದಿಬ್ಬ (26) ಅವರನ್ನುಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಶಮೀರ್ ಮತ್ತು ನೌಶಾದ್ ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಎರಡು ಕಾರು, ಸ್ಕೂಟರ್, ನಾಲ್ಕು ಮೊಬೈಲ್, ಮೂರು ಜೀವಂತ ದನಗಳು, 70 ಕೆ.ಜಿ. ಮಾಂಸ ಸಹಿತವಾಗಿ 12,73,300 ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಗೋ ಹತ್ಯಾ ನಿಷೇಧ ಕಾಯ್ದೆ, ಪ್ರಾಣಿ ಹಿಂಸಾ ಪ್ರತಿಬಂಧಕ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಕುಮಾರಚಂದ್ರ, ಭರತ್ ರೆಡ್ಡಿ, ಮಹೇಶ್ ಪ್ರಸಾದ್, ಕಾಪು SI ರಾಜಶೇಖರ್ ಬಿ. ಸಾಗನೂರು, SI ಐ.ಆರ್. ಗಡ್ಡೇಕರ್, ರವೀಂದ್ರ, ಆನಂದ್, ಅರುಣ್, ಮಂಜುನಾಥ್, ಸಂದೇಶ್, ಪರಶುರಾಮ್, ಚಂದ್ರಶೇಖರ್, ಜಗದೀಶ್, ಮಹಾಬಲ, ಗೀತಾ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.