ಬೆಂಗಳೂರು: ಮದ್ಯದ ಅಮಲಿನಲ್ಲಿ ಸಿಗರೆಟ್ ಸೇದುತ್ತಿದ್ದ ಯುವಕನ ಜತೆ ಗಲಾಟೆ ಮಾಡಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಜೆ.ಜೆ.ನಗರ ನಿವಾಸಿಗಳಾದ ಸೈಯದ್ ಅಮನ್ (23), ರೆಹಮತ್ ಪಾಷಾ (23) ಮತ್ತು ಸೈಯದ್ ಕಬೀರ್ (22) ಎಂಬುವರನ್ನು ಬಂಧಿಸಲಾಗಿದೆ.
ಆರೋಪಿ ಗಳು ಜುಲೈ 26ರಂದು ಠಾಣೆ ವ್ಯಾಪ್ತಿಯ ಬಾರ್ ಬಳಿ ಮದ್ಯದ ಅಮಲಿನಲ್ಲಿ ಸಾರ್ವ ಜನಿಕವಾಗಿ ಯುವಕನ ಮೇಲೆ ಮಾರ ಕಾಸ್ತ್ರದಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳು ಠಾಣೆ ವ್ಯಾಪ್ತಿಯ ಎಸ್ ಎಲ್‌ಎನ್ ಬಾರ್‌ಗೆ ಕಳೆದ ಶುಕ್ರವಾರ ಹೋಗಿದ್ದು, ತಡರಾತ್ರಿ ಮದ್ಯ ಸೇವಿಸಿ ಹೊರಬಂದಿದ್ದಾರೆ. ಅದೇ ವೇಳೆ ಪಕ್ಕದ ಬೀಡ ಅಂಗಡಿ ಬಳಿ ಸಿಗರೆಟ್ ಸೇದುತ್ತಿದ್ದ ಯುವಕ ನೊಬ್ಬ ತಿಳಿಯದೇ ಆರೋಪಿಗಳಿಗೆ ಹೊಗೆ ಬಿಟ್ಟಿದ್ದಾನೆ. ಇದೇ ವಿಚಾರವಾಗಿ ಆರೋಪಿಗಳು ಹಾಗೂ ಯುವಕನ ನಡುವೆ ಮಾರಾಮಾರಿ ನಡೆದಿದೆ.
ಆಗ ಯುವಕ ಆರೋಪಿಗಳು ಹಲ್ಲೆ ನಡೆಸುವುದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆರೋಪಿಗಳ ಪೈಕಿ ಒಬ್ಬ ಆ ಮೊಬೈಲ್ ಕಸಿದುಕೊಂಡಿದ್ದಾನೆ. ಆಗ ಯುವಕ ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾನೆ. ಯುವಕನ ಚೀರಾಟ ಕೇಳಿದ ಸ್ಥಳೀಯರು ಆರೋಪಿಗಳನ್ನು ಹಿಡಿದುಕೊಂಡು ಥಳಿಸಲು ಮುಂದಾಗಿದ್ದಾರೆ. ಈ ವೇಳೆ ಮೊಬೈಲ್ ಕಸಿದುಕೊಂಡ ಆರೋಪಿ ಪರಾರಿಯಾಗಿದ್ದ. ಆದರೆ, ವಶದಲ್ಲಿದ್ದ ಇಬ್ಬರು ಆರೋಪಿಗಳಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅದನ್ನು ಕಂಡು ಪರಾರಿಯಾಗಿದ್ದ ಆರೋಪಿ, ಮಾರಕಾಸ್ತ್ರ ತಂದು ಸಾರ್ವಜನಿಕವಾಗಿ ಯುವಕನ ಮೇಲೆ ಮನಸೋ ಇಚ್ಛೆ ಹೊಡೆದಿದ್ದಾನೆ. ಆಗ ಯುವಕನಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ. ಈ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ವೈರಲ್ ಆಗಿತ್ತು. ಈ ಸಂಬಂಧ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.