Advertisement

ನೀರು ಕೇಳಿದ ಮಹಿಳೆಯರ ಮೇಲೆ ಹಲ್ಲೆ

07:17 AM Jun 29, 2019 | Team Udayavani |

ಚಿಂತಾಮಣಿ: ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರು ಕೇಳಿದ ಗ್ರಾಮಸ್ಥರ ಮೇಲೆಯೇ ಗ್ರಾಮ ಪಂಚಾಯಿತಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ತನ್ನ ಸಹಚರರ ಜತೆ ಸೇರಿ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮುರುಗಮಲ್ಲ ಗ್ರಾಮದಲ್ಲಿ ಹಲವು ದಿನಗಳಿಂದ ನೀರಿನ ಸಮಸ್ಯೆ ಇದ್ದು, ಗ್ರಾಮ ಪಂಚಾಯಿತಿ ವತಿಯಿಂದ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಇದಕ್ಕಾಗಿ ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಆದರೂ ನೀರಿನ ಸಮಸ್ಯೆ ನೀಗದ ಬಗ್ಗೆ ಗ್ರಾಮಸ್ಥರಲ್ಲಿ ಆಕ್ರೋಶ ಮಡುಗಟ್ಟಿತ್ತು. ಈ ಮಧ್ಯೆ, ಗುರುವಾರ ಸಂಜೆ ಗ್ರಾಪಂನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಂಕರ್‌ ಎಂಬಾತ, ಗ್ರಾ.ಪಂ. ಅನುಮತಿ ಇಲ್ಲದೇ ಗ್ರಾಮದ ಮನೆಯೊಂದಕ್ಕೆ ನಲ್ಲಿ ಸಂಪರ್ಕ ಕಲ್ಪಿಸುತ್ತಿದ್ದ. ಇದನ್ನು ಪ್ರಶ್ನಿಸಿದ ನೆರೆಹೊರೆಯ ಮಹಿಳೆಯರು, ನಮಗೆ ಕುಡಿಯಲು ಸಮರ್ಪಕವಾಗಿ ನೀರು ಕೊಡಿ ಎಂದು ಗಲಾಟೆ ಆರಂಭಿಸಿದರು.

ಈ ವೇಳೆ, ಗ್ರಾಮಸ್ಥರ ಮೇಲೆ ಶಂಕರ್‌ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದು, ಸುಜಾತಾ, ಲಲಿತಾ, ಅಮರಾವತಮ್ಮ, ಪದ್ಮಾವತಮ್ಮ, ಸುಮಾ ಸೇರಿ 18 ಮಹಿಳೆಯರು, ಪವನ್‌, ರಾಧಾಕಷ್ಣ, ಪ್ರಶಾಂತ್‌ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಚಾರ‌್ಲಹಳ್ಳಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಗ್ರಾಪಂ ನೌಕರನ ಮನೆ ಮುಂದೆ ಮಾತ್ರ ನಲ್ಲಿ ಹಾಕಿಸಿದ್ದಾರೆಂದು ಹೇಳಿ ಕೆಲವರು ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾವು ಯಾರ ಮನೆ ಮುಂದೆಯೂ ನಲ್ಲಿ ಅಳವಡಿಸಿಲ್ಲ. ವೈಯಕ್ತಿಕ ಕಾರಣಗಳಿಂದ ಗಲಾಟೆ ನಡೆದಿರಬಹುದು. ಕುಡಿಯುವ ನೀರಿನ ವಿಚಾರದಲ್ಲಿ ಗಲಾಟೆ ನಡೆದ ಬಗ್ಗೆ ಮಾಹಿತಿಯಿಲ್ಲ.
-ಗೀತಾ, ಮುರಗಮಲ್ಲ ಗ್ರಾಪಂ ಅಭಿವೃದ್ದಿ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next