ಕಲಬುರಗಿ: ರೈತ ಹೋರಾಟಗಾರ ಮತ್ತು ಸಂಯುಕ್ತ ಕಿಶಾನ್ ಮೋರ್ಚಾದ ಮುಂಚೂಣಿ ನಾಯಕ ರಾಕೇಶ ಸಿಂಗ್ ಟಿಕಾಯತ್ ಅವರ ಮೇಲೆ ರಾಜ್ಯದಲ್ಲಿ ನಡೆದಿರುವ ಹಲ್ಲೆ ಖಂಡಿಸಿ ಸಂಯುಕ್ತ ಹೋರಾಟ ಸಮಿತಿ ಕರ್ನಾಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳ ವಾರ ಪ್ರತಿಭಟನೆ ಮಾಡಿದರು.
ಜಿಲ್ಲಾಧಿಕಾರಿ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಇದೊಂದು ಅಮಾನವೀಯ ನಡೆಯಾಗಿದೆ. ಇದರಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಜನರ ಕೈವಾಡ ಇದೆ. ತಾವು ನೈತಿಕತೆ ಹೊತ್ತು ಘಟನೆ ಸಮಗ್ರ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಪ್ರತಿಭಟನಾಕಾರರ ಸರಕಾರದ ವಿರದ್ಧ ಘೋಷಣೆ ಕೂಗಿ ಆಗ್ರಹಿಸಿದರು.
13 ತಿಂಗಳು ದೆಹಲಿಯಲ್ಲಿ ಸರಕಾರದ ಡೊಂಕು ತಿರ್ಮಾನಗಳ ವಿರುದ್ಧ, ರೈತ ವಿರೋಧಿ ಕಾಯಿದೆಗಳ ವಿರುದ್ಧ ಹೋರಾಟ ನಡೆಸಿ ಗೆಲುವು ದಕ್ಕಿಸಿಕೊಟ್ಟ ಸಿಟ್ಟಿನಿಂದಾಗಿ ಬಿಜೆಪಿ ಸರಕಾರ ಇಂತಹದೊಂದು ಅಸಹ್ಯ ಮಾಡಿ ನಾಡಿನ ಜನತೆ ಎದುರು ಖುದ್ದು ಮುಖ ಕಪ್ಪಗೆ ಮಾಡಿಕೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದು ಹತಾಶೆ ದಾಳಿಯಾಗಿದೆ. ಕೂಡಲೇ ರಾಜ್ಯ ಸರಕಾರ ನೈತಿಕತೆ, ಬದ್ಧತೆ ಪ್ರದರ್ಶನ ಮಾಡಿ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಶರಣ ಬಸಪ್ಪ ಮಮಶೆಟ್ಟಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮೌಲಾಮುಲ್ಲಾ, ಮಹೇಶ್ ಎಸ್.ಬಿ, ಎಂ.ಬಿ.ಸಜ್ಜನ್, ಜಾವೇದ್ ಹುಸೇನ್, ನಾಗಯ್ಯ ಸ್ವಾಮಿ, ನಾಗಣ್ಣ ಥಂಬೆ, ಅರ್ಜುನ ಗೊಬ್ಬೂರು, ಅಶ್ವಿನಿ ಮದನಕರ್, ಸಾಯಿಬಣ್ಣಾ ಗುಡಬಾ, ರೇವಣಸಿದ್ಧ ಕಲಬುರಗಿ, ರಾಯಪ್ಪ ಇದ್ದರು.