ಬೆಂಗಳೂರು: ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಟಿಎಂ ಲೇಔಟ್‌ನ ನಂದಿನಿ ಹಲ್ಲೆಗೊಳಗಾದವರು.
ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಎಂಟು ಗಂಟೆಗೆ ತಮ್ಮ ಇನೋವಾ ಕಾರು ಅಡ್ಡಗಟ್ಟಿದ ಸುಮಾರು 200ಕ್ಕೂ ಅಧಿಕ ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ನಂದಿನಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಐಟಿ ಉದ್ಯೋಗಿ ನಂದಿನಿ, ಪ್ರಾಣಿ ದಯಾ ಸಂಘದ ಸದಸ್ಯೆಯೂ ಆಗಿದ್ದಾರೆ. ಟಿಪ್ಪು ಸರ್ಕಲ್ ಬಳಿ ಕೆಲವರು ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಶನಿವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಇಬ್ಬರು ಪೊಲೀಸ್ ಪೇದೆಗಳನ್ನು ಸ್ಥಳಕ್ಕೆ ಕಳುಹಿಸಿ ಮೂರು ಗೋವುಗಳನ್ನು ರಕ್ಷಿಸಿ ಕೋರಮಂಗಲದ ಪ್ರಾಣಿದಯಾ ಸಂಘಕ್ಕೆ ಬಿಟ್ಟು ಬರಲಾಗಿತ್ತು.
ಕಾರು ಅಡ್ಡಗಟ್ಟಿ ಹಲ್ಲೆ: ಪೊಲೀಸ್ ಠಾಣೆಯಿಂದ ವಾಪಸ್ ಬಂದ ನಂದಿನಿ, ಮನೆಗೆ ಹೋಗುವಾಗ ಆವಲಹಳ್ಳಿ ಮುಖ್ಯರಸ್ತೆಯ ಟಿಪ್ಪುಸರ್ಕಲ್ ಬಳಿ ನೂರಾರು ಮಂದಿ ಅವರ ಕಾರು ಅಡ್ಡಗಟ್ಟಿ, ಮುಂಭಾಗದ ಗಾಜು ಚೂರು ಮಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಗುಂಪು ಹಾಗೂ ನಂದಿನಿ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವರು ನಂದಿನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ನಂದಿನಿ ಅವರ ತಲೆ ಹಾಗೂ ಬಲ ಕೈಗೆ ಗಂಭೀರ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದರು.
ಈ ಮಧ್ಯೆ, ಮಹಿಳಾ ಟೆಕಿ ಮೇಲಿನ ಹಲ್ಲೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಕರ್ನಾಟಕ ಗೂಂಡಾ ರಾಜ್ಯವಾಗಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರು ಸೇರಿದಂತೆ ಯಾರಿಗೂ ಸುರಕ್ಷತೆ ಇಲ್ಲ ಎಂದು ಶೋಭಾ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಮತ ಒಲಿಕೆಯ ರಾಜಕಾರಣದಿಂದಾಗಿ ಗೂಂಡಾಗಳು ಕಾನೂನು ಕೈಗೆತ್ತಿಕೊಳ್ಳುವಂತೆ ಆಗಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.
ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಸಂಬಂಧ ಪೊಲೀಸರಿಗೆ ದೂರು ನೀಡಿದ ಮಹಿಳೆಯ ಮೇಲೆ ಗುಂಪೊಂದು ದಾಳಿ ನಡೆಸಿರುವುದು ಖಂಡನೀಯ. ಮುಖ್ಯಮಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ
– ಬಿ.ಎಸ್, ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ