Advertisement

ನೀರು ದುರ್ಬಳಕೆ ಪ್ರಶ್ನಿಸಿದ್ದಕ್ಕೆ ಹಲ್ಲೆ

10:51 AM Mar 12, 2019 | |

ಕಡೂರು: ತಾಲೂಕಿನ ಐತಿಹಾಸಿಕ ಮದಗದಕೆರೆ ಚಾನಲ್‌ನ ನೀರಿನ ದುರ್ಬಳಕೆ ಕುರಿತು ಪ್ರಶ್ನಿಸಲು ಹೋದ ಜನರ ಮೇಲೆ
ತಾಲೂಕಿನ ಲಕ್ಕೇನಹಳ್ಳಿ ಗ್ರಾಮದ ನೂರಾರು ಜನರು ಏಕಾಏಕಿ ಹಲ್ಲೆ ನಡೆಸಿದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಪಟ್ಟಣದ ಸುಭಾಷ್‌ ನಗರ ವಾಸಿಗಳಾದ ಬಸವರಾಜ್‌(43), ಸುರೇಶ್‌(46), ಮಂಜುನಾಥ್‌(35), ಪರಮೇಶ್‌(43), ಹಳೇಪೇಟೆ ವಾಸಿಗಳಾದ ಶಿವಕುಮಾರ್‌(43), ಮೋಹನ್‌ಕುಮಾರ್‌ (43) ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಲಕ್ಕೇನಹಳ್ಳಿ ಗ್ರಾಮದ ಜನರು ವಾಡಿಕೆ ನೀರು ಬಳಸಿಕೊಳ್ಳುತ್ತಿದ್ದರು. ತೂಬನ್ನು ಎತ್ತಿದ ಬಳಿಕ ಆ ನೀರನ್ನೂ ಬಳಸಿಕೊಂಡ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದವರ ಮೇಲೆ ಲಕ್ಕೇನಹಳ್ಳಿ ಜನರ ಗುಂಪು ಕಾರದಪುಡಿ, ದೊಣ್ಣೆ, ಕಲ್ಲು ಮತ್ತಿತರ ಆಯುಧಗಳನ್ನು ಬಳಸಿ ಹಲ್ಲೆಗೆ ಯತ್ನಿಸಿದ್ದಾರೆ. ಗ್ರಾಮದ ಮಹಿಳೆಯರೂ ಕೂಡ ಹಲ್ಲೆ ಪ್ರಕರಣದಲ್ಲಿ ಭಾಗವಹಿಸಿದ್ದರೆಂದು ಹಲ್ಲೆಗೊಳಗಾದ ಶಿವಕುಮಾರ್‌ ಪತ್ರಿಕೆಗೆ ತಿಳಿಸಿದರು. 

ಘಟನೆ ಹಿನ್ನೆಲೆ: ಉಪವಿಭಾಗಾಧಿಕಾರಿ ಬಿ.ಆರ್‌.ರೂಪ, ಶಾಸಕ ಬೆಳ್ಳಿಪ್ರಕಾಶ್‌, ತಹಶೀಲ್ದಾರ್‌ ಉಮೇಶ್‌, ಸಣ್ಣ ನೀರಾವರಿ ಎಇಇ ಆನಂದನ್‌ ಮತ್ತು ಕಡೂರು-ಬೀರೂರು ಅಡಕೆ ಬೆಳೆಗಾರರ ಸಂಘದ ಸದಸ್ಯರನ್ನು ಒಳಗೊಂಡ ಸಭೆ ಇತ್ತೀಚೆಗೆ ನಡೆದು ಮಾ. 8 ರಂದು ತಾಲೂಕಿನ ಐತಿಹಾಸಿಕ ಮದಗದಕೆರೆ ತೂಬನ್ನು ತೆರೆದು ಒಂದೂಕಾಲು ಅಡಿ ನೀರನ್ನು ಕಾಲುವೆಗೆ ಹರಿಸಲು ಪ್ರಾರಂಭಿಸಲಾಯಿತು.

ಈ ಹಿನ್ನೆಲೆಯಲ್ಲಿ ಕಾಲುವೆಯ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಅಡಕೆ ಬೆಳೆಗಾರರ ಸಂಘದ ಸದಸ್ಯರು ಪಾಳಿಯ ಮೇಲೆ ಚಾನಲ್‌ ನೀರನ್ನು ಗಮನಿಸಲು ನಿರ್ಧರಿಸಿದ್ದರು. ಭಾನುವಾರ ರಾತ್ರಿ ಸುಭಾಷ್‌ ನಗರದ ಸದಸ್ಯರು ಚಾನಲ್‌ ಹರಿಯುವ ಲಕ್ಕೇನಹಳ್ಳಿ ಗ್ರಾಮದಲ್ಲಿ ವೀಕ್ಷಣೆಗೆ ತೆರಳಿದಾಗ ಹಲ್ಲೆ ಘಟನೆ ನಡೆದಿದೆ. ಬೆಳೆಗಾರರ ಸಂಘದ ಸದಸ್ಯರೊಬ್ಬರು ಚಾನಲ್‌ ಏರಿಯ ಮೇಲೆ
ತೆಂಗಿನ ಗರಿ ಮತ್ತಿತರ ಟಾರ್ಪಲ್‌ನಿಂದ ಮುಚ್ಚಿ ನೀರೆತ್ತುತ್ತಿದ್ದ ಮೋಟಾರ್‌ನ್ನು ಗಮನಿಸಿ ಹಳ್ಳಕ್ಕೆ ಇಳಿದಾಗ ಸುತ್ತ ಕತ್ತಲೆಯಲ್ಲಿ ಅಲ್ಲಲ್ಲಿ ಗುಂಪಾಗಿದ್ದ ಗ್ರಾಮದ ಜನರು ಆಯುಧಗಳನ್ನು ಹಿಡಿದು ಏಕಾಏಕಿ ನುಗ್ಗಿ ಬಂದರು ಎಂದು ಹಲ್ಲೆಗೊಳಗಾದ ಶಿವಕುಮಾರ್‌ ತಿಳಿಸಿದ್ದು, ಈ ಕುರಿತು ಪೊಲೀಸರಿಗೂ ದೂರು ನೀಡಲಾಗಿದೆ ಎಂದರು. 

ಸೋಮವಾರ ಬೆಳಗ್ಗೆ ಘಟನೆ ತಿಳಿದ ಶಾಸಕ ಬೆಳ್ಳಿಪ್ರಕಾಶ್‌ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಲಕ್ಕೇನಹಳ್ಳಿ ಗ್ರಾಮದ ಜನರು,ಕಡೂರು-ಬೀರೂರು ಅಡಕೆ ಬೆಳೆಗಾರರ ಸಂಘದ ಸದಸ್ಯರು ಹಾಗೂ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ ಗಳು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪರಸ್ಪರ ಚರ್ಚೆ ಅನಡೆಸಿದ್ದು, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಚ್‌. ಶಂಕರ್‌ ಮಾಹಿತಿ ನೀಡಿದರು. 

Advertisement

ಈ ಸಂದರ್ಭ ಅಡಕೆ ಬೆಳೆಗಾರರ ಸಂಘದ ವಿವಿಧ ಪದಾಧಿಕಾರಿಗಳಾದ ಅರೇಕಲ್‌ ಪ್ರಕಾಶ್‌, ಶಿವಕುಮಾರ್‌, ಕೆ.ಎಚ್‌.ಲಕ್ಕಣ್ಣ ಮುಂತಾದವರು ಇದ್ದರು. ಘಟನೆ ಬಳಿಕ ಲಕ್ಕೇನಹಳ್ಳಿ ಗ್ರಾಮದಲ್ಲಿ ರಾತ್ರಿಯಿಂದಲೇ ಪೊಲೀಸರ ಕಾವಲು ಹಾಕಲಾಗಿದೆ. ಲಕ್ಕೇನಹಳ್ಳಿಯ ಕೆಲವು ಗ್ರಾಮಸ್ಥರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಗೊತ್ತಾಗಿದೆ. ಒಟ್ಟಾರೆ ಇಡೀ ಘಟನೆ ಬೂದಿ ಮುಚ್ಚಿದ ಕೆಂಡದಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next