Advertisement

ತೆರಿಗೆ ವಂಚಿಸಿದ ತಂಬಾಕು ಉತ್ಪನ್ನಗಳ ಮೇಲೆ ದಾಳಿ

12:44 PM Dec 28, 2022 | Team Udayavani |

ಬೆಂಗಳೂರು: ವಾಣಿಜ್ಯ ತೆರಿಗೆ ವಂಚಿಸಿ ಅಕ್ರಮವಾಗಿ ತಂಬಾಕು ಉತ್ಪನ್ನ ಉತ್ಪಾದಿಸಿ ಸಾಗಿಸುತ್ತಿದ್ದ 24 ಘಟಕಗಳು ಹಾಗೂ ಇದಕ್ಕೆ ಸಹಕಾರ ನೀಡುತ್ತಿದ್ದ 13 ವಾಣಿಜ್ಯ ತೆರಿಗೆ ಕಚೇರಿ ಸೇರಿದಂತೆ 37 ಕಡೆಗಳಲ್ಲಿ ಮಂಗಳವಾರ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

Advertisement

ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದು ಬೆಂಗಳೂರಿನ 9 ಸ್ಥಳ ಸೇರಿದಂತೆ ರಾಜ್ಯದ 37 ಕಡೆಗಳಲ್ಲಿ ತಂಬಾಕು ಉತ್ಪನ್ನಗಳ ಘಟಕ, ಗೋದಾಮು, ವಾಣಿಜ್ಯ ತೆರಿಗೆ ಕಚೇರಿಗಳ ಮೇಲೆ ಪೊಲೀಸರು ಶೋಧ ನಡೆಸಿದ್ದಾರೆ. ದಾಳಿ ವೇಳೆ ತಂಬಾಕು ಉತ್ಪನ್ನ ಘಟಕದ ಮಾಲೀಕರು ವಾಣಿಜ್ಯ ತೆರಿಗೆ ವಂಚಿಸಿ ಉತ್ಪನ್ನಗಳನ್ನು ಸಾಗಿಸಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಇದರಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಗೊತ್ತಾಗಿದೆ. ತೆರಿಗೆ ವಂಚಿಸಿದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದಲ್ಲಿ ನಷ್ಟ ಉಂಟಾಗಿದೆ.

ತಂಬಾಕು ಉತ್ಪನ್ನಗಳಿಗೆ ವಾಣಿಜ್ಯ ತೆರಿಗೆ ಪಾವತಿಸದೇ ಸಾಗಿಸುತ್ತಿರುವುದು ಕಂಡು ಬಂದಿತ್ತು. ಇದರಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳೂ ಶಾಮೀಲಾಗಿರುವ ಸುಳಿವು ಸಿಕ್ಕಿದೆ. ದಾಳಿಗೊಳಗಾದ ತಂಬಾಕು ಉತ್ಪನ್ನ ತಯಾರಕರು ಕಚ್ಚಾ ವಸ್ತುಗಳ ಖರೀದಿ, ವೆಚ್ಚಗಳು, ಸಿದ್ಧಪಡಿಸಿದ ಉತ್ಪನ್ನಗಳ ಮಾರಾಟ ಇತ್ಯಾದಿಗಳ ಬಗ್ಗೆ ತಮ್ಮ ಖಾತೆಯ ಪುಸ್ತಕಗಳನ್ನು ಇಟ್ಟುಕೊಂಡಿರಲಿಲ್ಲ. ಇದು ಜಿಎಸ್‌ಟಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.

150 ಪೊಲೀಸರಿಂದ ದಾಳಿ: ಒಟ್ಟು 150 ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಸದ್ಯ ದಾಳಿ ಮುಂದುವರಿದಿದೆ. ದಾಳಿಗೊಳಗಾದ ಕಂಪನಿಗಳು ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆ ಲೋಕಾಯುಕ್ತ ಕೈ ಸೇರಿದೆ. ಪಾನ್‌ ಮಸಾಲ, ಗುಟ್ಕಾ, ಇತರ ತಂಬಾಕು ಉತ್ಪನ್ನಗಳನ್ನು ತಯಾರಿಸಿ ಸಾಗಿಸುತ್ತಿದ್ದ ಕಂಪನಿಗಳ ಮಾಲೀಕರಿಗೆ ನೋಟಿಸ್‌ ಕೊಟ್ಟು ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಎಷ್ಟು ವರ್ಷಗಳಿಂದ ಎಷ್ಟು ಪ್ರಮಾಣದಲ್ಲಿ ಉತ್ಪನ್ನಗಳನ್ನು ಕ್ರಮವಾಗಿ ಸಾಗಾಟ ಮಾಡಲಾಗಿದೆ ಎಂಬುದು ತಿಳಿದು ಬರಲಿದೆ ಎಂದು ಲೋಕಾಯುಕ್ತ ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next