ಸಂಕೇಶ್ವರ : ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಇತ್ತೀಚೆಗೆ ಕನ್ನಡ ಧ್ವಜ ತೆರವು ಮಾಡುವಂತೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದ ನಾಲ್ವರನ್ನು ಕೊನೆಗೂ ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕನ್ನಡ ಹೋರಾಟಗಾರರು ಕರೆ ನೀಡಿದ್ದ ಸಂಕೇಶ್ವರ ಬಂದ್ ಹಿಂದಕ್ಕೆ ಪಡೆಯಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ತಾಲೂಕಿನ ಅಂಕಲೆ ಗ್ರಾಮದಲ್ಲಿ ಹಾಕಲಾಗಿದ್ದ ಕನ್ನಡ ದ್ವಜ ಹಾಗೂ ಸಂಗೊಳ್ಳಿ ರಾಯಣ್ಣ ನಾಮಫಲಕ ತೆರವು ಮಾಡುವಂತೆ ಗ್ರಾಮದಲ್ಲಿನ ಇಬ್ಬರು ಕನ್ನಡ ಸಂಘಟನೆಯ ಯುವಕರ ಮೇಲೆ ಹಲ್ಲೆ ಮಾಡಲಾಗಿತ್ತು.
ಈ ಕುರಿತು ಸಂಕೇಶ್ವರದ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ದ ದೂರು ಕೂಡಾ ದಾಖಲಾಗಿತ್ತು. ಐವರಲ್ಲಿ ಅದೇ ದಿನ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದರು. ಇನ್ನುಳಿದ ನಾಲ್ವರು ಪರಾರಿಯಾಗಿದ್ದರು.
ಇದರ ವಿರುದ್ದ ಕನ್ನಡಿಗರು ಹೋರಾಟ ಮಾಡಿ ಶುಕ್ರವಾರ ಸಂಜೆ ವರೆಗೆ ಇನ್ನುಳಿದವರನ್ನು ಬಂಧಿಸುವಂತೆ ಗಡುವು ನೀಡಿದ್ದರು. ಇಲ್ಲದೆ ಹೋದಲ್ಲಿ ಸಂಕೇಶ್ವರ ಬಂದ್ ಮಾಡುವ ಬಗ್ಗೆ ನಿರ್ಣಯ ಕೈಗೊಂಡಿದ್ದರು.
ಆದರೆ ಇಂದು ಎಲ್ಲ ಹಲ್ಲೆಕೋರರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಸಂಕೇಶ್ವರ ಬಂದ್ ಹಿಂದಕ್ಕೆ ಪಡೆಯಲಾಗಿದೆ.