ಚಿಕ್ಕೋಡಿ: ಸಾಮೂಹಿಕ ಅತ್ಯಾಚಾರ, ಕೊಲೆ, ದರೋಡೆಯಂತಹ 25 ಪ್ರಕರಣಗಳಲ್ಲಿ ಬೇಕಾಗಿದ್ದ ರಾಜಸ್ಥಾನ ಜೋಧಪುರದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗ್ಯಾಂಗ್ ಮೇಲೆ ಮಹಾರಾಷ್ಟ್ರದ ಕೊಲ್ಲಾಪುರ ಪೊಲೀಸರು ಮಂಗಳವಾರ ರಾತ್ರಿ ದಾಳಿ ನಡೆಸಿ ಓರ್ವ ಆರೋಪಿಯನ್ನು ಹತ್ಯೆಗೈದಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳು ಗಂಭೀರ ಗಾಯಗೊಂಡಿದ್ದಾರೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕೊಲ್ಲಾ ಪುರ ಬಳಿಯ ಕಿಣಿ ಟೋಲ್ ನಾಕಾದಲ್ಲಿ ದಾಳಿ ನಡೆಸಲಾಗಿದೆ. ರಾಜಸ್ಥಾನದ ಜೋಧಪುರದ ಬಿಶನೋಯಿ ಗ್ಯಾಂಗ್ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಪ್ರಯತ್ನಿಸಿತ್ತು. ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ ಓರ್ವ ಆರೋಪಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ನಾಲ್ವರು ಪೊಲೀಸ ರಿಗೂ ಗಂಭೀರ ಗಾಯಗಳಾಗಿವೆ. ಸ್ಥಳೀಯ ಕೊಲ್ಲಾ ಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಂಪಿನ ಮುಖಂಡ ಶಾಮಲಾಲ್ ಗೋವರ್ಧನ ಬಿಶ ನೋಯಿ (23), ಶ್ರಾವಣಕುಮಾರ ಮನೋಹರ ಲಾಲ್ ಬಿಶನೋಯಿ (24), ಶ್ರೀರಾಮ ಪಾಂಚ ಲಾಲ್ ಬಿಶನೋಯಿ (30) ಗಾಯಗೊಂಡಿದ್ದಾರೆ. ಸಹಾಯಕ ಪೊಲೀಸ್ ನಿರೀಕ್ಷಕ ಸತ್ಯಜೀತ ಘುಲೆ, ಪೇದೆ ಅಜೀತ ವಾಡೇಕರ, ಪಾಂಡರಂಗ ಪಾಟೀಲ, ನಾಮದೇವ ಯಾದವ ಸಹ ಗಂಭೀರ ಗಾಯಗೊಂಡಿದ್ದಾರೆ.
ಕರ್ನಾಟಕದಲ್ಲೂ ಇತ್ತು ತಂಡ: ಕುಖ್ಯಾತ ಬಿಶನೋಯಿ ಗ್ಯಾಂಗ್ ರಾಜಸ್ಥಾನ, ಗುಜರಾತ ಹಾಗೂ ಇತರ ರಾಜ್ಯಗಳಲ್ಲಿ ಎರಡು ವರ್ಷಗಳಿಂದ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿತ್ತು. ಇವರನ್ನು ಸೆರೆ ಹಿಡಿಯಲು ರಾಜಸ್ಥಾನ ಪೊಲೀಸರು ಮೂರು ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದರು. ರಾಜಸ್ಥಾನ ಪೊಲೀಸರ ಕಣ್ಣು ತಪ್ಪಿಸಿ ಈ ಗ್ಯಾಂಗ್ ಎರಡು ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿತ್ತು. ಬೆಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಂಗನ್ನು ರಾಜಸ್ಥಾನ ಮತ್ತು ಕರ್ನಾಟಕ ಪೊಲೀಸರು ಬೆನ್ನಟ್ಟಿದ್ದರು. ಸಂಶಯಾಸ್ಪದ ವಾಹನ ಕೊಲ್ಲಾಪುರ ಮಾರ್ಗವಾಗಿ ಮುಂಬೈ ಕಡೆ ರವಾನೆ ಆಗುತ್ತಿದೆ ಎಂಬ ಮಾಹಿತಿ ಬೆಳಗಾವಿ ಎಸ್‌ಪಿ ಕೊಲ್ಲಾಪುರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊಲ್ಲಾಪುರ ಪೊಲೀಸರ ತಂಡ ಕಿಣಿ ಟೋಲ್ ನಾಕಾ ಮೇಲೆ ದೌಡಾಯಿಸಿದ್ದರು.
ಮಂಗಳವಾರ ರಾತ್ರಿ ಕೊಲ್ಲಾಪುರದಿಂದ ಪುಣೆ ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಕಾರನ್ನು ಪೊಲೀಸರು ತಡೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಾರದಪುಡಿ ಎರಚಲು ಮುಂದಾಗಿದ್ದಲ್ಲದೇ ಕಾರನ್ನು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳಿಗೆ ಶರಣಾಗಲು ಸೂಚಿಸಿದರೂ ಒಪ್ಪದೇ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಪೊಲೀಸರೂ ಪ್ರತಿದಾಳಿ ಮಾಡಿ ಓರ್ವನನ್ನು ಹತ್ಯೆಗೈದಿದ್ದಾರೆ.