Advertisement

ಪಿಒಪಿ ಮೂರ್ತಿ ತಯಾರಿ ಘಟಕಗಳ ಮೇಲೆ ದಾಳಿ

09:11 AM Aug 18, 2019 | Suhan S |

ಕೆಂಗೇರಿ: ನಗರದಲ್ಲಿ ಹೆಚ್ಚುತ್ತಿರುವ ಪಿಒಪಿ ಗಣೇಶಮೂರ್ತಿ ತಯಾರಿಕೆ ಘಟಕಗಳ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳು ಶನಿವಾರ ದಿಢೀರ್‌ ದಾಳಿ ನಡೆಸಿ, ಲಕ್ಷಾಂತರ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಈ ವೇಳೆ ಘಟಕಗಳಲ್ಲಿ ನಿಯಮ ಮೀರಿ ನಿಷೇಧಿತ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದುದನ್ನು ಕಂಡು ಕೆಂಡಾಮಂಡಲರಾದ ಮಂಡಳಿ ಅಧ್ಯಕ್ಷರು, ಕೂಡಲೆ ಘಟಕಗಳನ್ನು ಮುಚ್ಚಿಸಿ, ಬೀಗಮುದ್ರೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆಂಗೇರಿ ಉಪನಗರ ಸೇರಿ ನಗರದ ಹಲವೆಡೆ ನಿಯಮ ಮೀರಿ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕುಂಬಳಗೋಡು-ಕೆ.ಗೊಲ್ಲಹಳ್ಳಿ, ಪೆಪ್ಸಿ ಫ್ಯಾಕ್ಟರಿ ಸಮೀಪದ ಘಟಕಗಳು ಹಾಗೂ ಮೈಸೂರು ರಸ್ತೆ ಆರ್‌.ವಿ ಎಂಜನಿಯರಿಂಗ್‌ ಕಾಲೇಜು ಬಳಿ ಇರುವ ಪಿಒಪಿ ಗಣೇಶ ಮೂರ್ತಿಗಳನ್ನು ಇರಿಸಿದ್ದ ಗೋಡನ್‌ ಮೇಲೆ ಶನಿವಾರ ದಾಳಿ ನಡೆಸಿ, ಪರಿಶೀಲಿಸಲಾಯಿತು.

ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌, ಘಟಕಗಳಲ್ಲಿ ಪಿಒಪಿ ಗಣೇಶ ವಿಗ್ರಹಗಳನ್ನು ತಯಾರಿಸಿ, ನಗರದ ನಾನಾ ಭಾಗ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸಿದರೆ ಕೆರೆ ನೀರು ಕಲುಷಿತಗೊಂಡು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮೂರ್ತಿ ತಯಾರಿಕೆ ನಿಲ್ಲಿಸುವಂತೆ ಈ ಘಟಕಗಳಿಗೆ ಹಲವು ಬಾರಿ ನೋಟಿಸ್‌ ನೀಡಿ, ಮುಚ್ಚಿಸಲಾಗಿತ್ತು. ಆದರೂ ಮತ್ತೆ ಘಟಕ ತೆರೆದು ಪಿಒಪಿ ಮೂರ್ತಿಗಳನ್ನು ತಯಾರಿಸುತ್ತಿದ್ದರು ಎಂದು ಹೇಳಿದರು.

ಪ್ರಸ್ತುತ ಘಟಕಗಳನ್ನು ಮುಚ್ಚಿಸಿದ್ದು, ಮಾಲೀಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇಲ್ಲಿ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಯಲಹಂಕದ ಸಂಸ್ಥೆಯೊಂದು ವೈಜ್ಞಾನಿಕ ವಿಧಾನದಲ್ಲಿ ಮರಳಾಗಿ ಪರಿವರ್ತಿಸಲಿದೆ. ಪ್ರಸ್ತುತ ವಶಕ್ಕೆ ಪಡೆದಿರುವ ಮೂರ್ತಿಗಳನ್ನು ಬಿಬಿಎಂಪಿ ಮೂಲಕ ಸಂಸ್ಥೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ, ಬಿಬಿಎಂಪಿ, ಪೊಲೀಸ್‌ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಗೋಡನ್‌ ನಲ್ಲಿರುವ ಪಿಒಪಿ ಗಣೇಶ ಮೂರ್ತಿಗಳನ್ನು ಲೆಕ್ಕ ಹಾಕಿ, ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಪಿಒಪಿ ಮೂರ್ತಿ ಧಿಕ್ಕರಿಸಿ: ಸಾರ್ವಜನಿಕರು ಸಹ ಪಿಒಪಿ ಗಣೇಶನ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಬೇಕು. ಇದರಿಂದ ಪರಿಸರ ಮಾಲಿನ್ಯ ಮತ್ತು ಜಲ ಮಾಲಿನ್ಯ ಆಗುವುದನ್ನು ತಪ್ಪಿಸಬಹುದು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಇಲಾಖೆಗಳು ಮಾಡಲಿವೆ ಎಂದು ಸುಧಾಕರ್‌ ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿರುವ ಪಿವಿಪಿ ಗಣೇಶ ತಯಾರಿಕೆ ಘಟಕಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳಿಗೆ ಮೌಖೀಕವಾಗಿ ಸೂಚಿಸಲಾಗಿದೆ. ಈ ಕುರಿತು ಇಂದೇ ಆದೇಶ ಹೊರಡಿಸಿ ಘಟಕಗಳನ್ನು ಶಾಶ್ವತವಾಗಿ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next