ಚನ್ನರಾಯಪಟ್ಟಣ: ಪುರಸಭೆ ವತಿಯಿಂದ ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 150 ಕೇಜಿ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ.
ಪಟ್ಟಣ ಹೃದಯ ಭಾಗದಲ್ಲಿನ ತರಕಾರಿ ಮಾರುಕಟ್ಟೆ, ಮಾಂಸದ ಮಾರು ಕಟ್ಟೆ, ಬಾಗೂರು ರಸ್ತೆ, ರೇಣುಕಾಂಬರಸ್ತೆ, ರಾಷ್ಟ್ರೀಯ ಹೆದ್ದಾರಿ, ಹೊಸಬಸ್ ನಿಲ್ದಾಣ ಸಮೀಪದ ಅಂಗಡಿಯ ಮೇಲೆ ದಾಳಿ ಮಾಡಿದಾಗ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದರು. ಕೆಲ ವರ್ತ ಕರು ತಮ್ಮ ಅಂಗಡಿಯ ವಸ್ತುಗಳನ್ನು ಕಟ್ಟಿಕೊಡಲು ಪ್ಲಾಸ್ಟಿಕ್ ಬಳಕೆ ಮಾಡು ತ್ತಿದ್ದರು ಇವುಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
ಹೂ ಮಾರಾಟಗಾರರ ವಿರೋಧ: ಹೂವಿನ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ವಶಪಡಿಸುವ ವೇಳೆ ಪುರಸಭೆ ಮಾಜಿ ಸದಸ್ಯ ಸತ್ಯನಾರಾಯಣ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದು, ಹೂವು ಪ್ಲಾಸ್ಟಿಕ್ ಕೈ ಚೀಲ ಬಿಟ್ಟು ಇತರೆ ಕೈಚೀಲ ದಲ್ಲಿ ಕಟ್ಟಿದರೆ ಒಣಗಿ ಹೋಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದಾಗ ಪುರಸಭೆ ಪರಿಸರ ಅಭಿಯಂತರ ವೆಂಕಟೇಶ್ ಮಾತನಾಡಿ, ಸರ್ಕಾರ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಿದೆ. ಹಾಗಾಗಿ ನಾವು ವಶಪಡಿಸಿಕೊಳ್ಳುತ್ತೇವೆ ಎಂದು ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.
ಪ್ಲಾಸ್ಟಿಕ್ ಕಾರ್ಖಾನೆಗಳನ್ನು ಮುಚ್ಚಿಸಿ: ದಿನಸಿ ವರ್ತಕರು ಪ್ಲಾಸ್ಟಿಕ್ ವಶ ಪಡಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದು, ಕಾರ್ಖಾನೆಯನ್ನು ಮೊದಲು ಮುಚ್ಚಿಸಿ, ತಯಾರಿಕೆ ನಿಂತರೆ ಯಾರು ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದರು, ವರ್ತಕರ ಮಾತಿಗೆ ಸೊಪ್ಪು ಹಾಕದ ಅಧಿಕಾರಿಗಳು ಪ್ಲಾಸ್ಟಿಕ್ ವಶಕ್ಕೆ ಪಡೆದರು. ಹೀಗೆ ಪ್ರತಿ ಅಂಗಡಿಯಲ್ಲಿ ಪ್ಲಾಸ್ಟಿಕ್ ವಶಕ್ಕೆ ಪಡೆಯುವ ಅಧಿಕಾರಿಗಳ ವಿರುದ್ಧ ವರ್ತಕರು ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಹೇಮಲತಾ, ಪುರಸಭೆ ಹಿರಿಯ ಅರೋಗ್ಯ ನಿರೀಕ್ಷಕಿ ಉಮಾದೇವಿ, ಆರೋಗ್ಯನಿರೀಕ್ಷಕ ಪುಟ್ಟಸ್ವಾಮಿ, ವ್ಯವಸ್ಥಾಪಕ ಕೃಷ್ಣೇಗೌಡ, ಸಿಬ್ಬಂದಿ ಶಾಖೆ ಅಧಿಕಾರಿ ಶಾರದಾಗೌಡ, ಕಂದಾಯ ನಿರೀಕ್ಷಕ ಶಿವಕುಮಾರ, ಕಂದಾಯ ಅಧಿಕಾರಿ ಯತೀಶ್, ಸಮುದಾಯ ಸಂಘಟನಾಧಿಕಾರಿ ಶಾರದಮ್ಮ, ಪೌರಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.