ತಿ.ನರಸೀಪುರ: ಕರ ವಸೂಲಿಗೆ ತೆರಳಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನೌಕರರ ಸಂಘದ ಕಚೇರಿ ಬಳಿ ಜಮಾವಣೆಗೊಂಡ ಬೃಹತ್ ಸಂಖ್ಯೆಯ ಸರ್ಕಾರಿ ನೌಕರರು, ತಾಲೂಕಿನ ರಾಮನಾಥಪುರದ ಹುಂಡಿ ಗ್ರಾಮದಲ್ಲಿ ಕರ ವಸೂಲಿಗೆ ತೆರಳಿದ್ದ ತುಂಬಲ ಗ್ರಾಪಂ ಅಭಿವೃದ್ಧಿ ಅಧಿಕಾರಿ ಧನಂಜಯ ಮೇಲೆ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೌಕರರ ಸಂಘದ ಅಧ್ಯಕ್ಷ ಎಂ.ಶಿವಶಂಕರ ಮೂರ್ತಿ ಮಾತನಾಡಿ, ಸರ್ಕಾರದ ಖಜಾನೆ ತುಂಬುವ ಕೆಲಸವಾದ ಕಂದಾಯ ವಸೂಲಾತಿ ಮಾಡುವಾಗ ಅವರ ಪಿಡಿಒ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿರುವ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಘಟನೆಯಿಂದ ನೌಕರರು ಧೃತಿಗೆಡದೆ ನಿರ್ಭಯವಾಗಿ ಕೆಲಸ ಮಾಡಬೇಕು. ಯಾವುದೇ ನೌಕರನ ಮೇಲೆ ಹಲ್ಲೆ ನಡೆದಾಗ ತಾಲೂಕು ಸಂಘ ಅವರ ಪರ ನಿಲ್ಲುತ್ತದೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ತಾಲೂಕಿನಲ್ಲಿ ಸುಮಾರು ಎರಡೂವರೆ ಸಾವಿರ ನೌಕರರು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಸುತ್ತಿದ್ದು, ನಮ್ಮ ಮೇಲೆ ಹಲ್ಲೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ನೌಕರರ ಕೊರತೆಯಿಂದ ಹೆಚ್ಚಿನ ಕಾರ್ಯಭಾರ ಹೊತ್ತು ಹಗಲಿರುಳು ಕಾರ್ಯನಿರ್ವಸುತ್ತಿರುವ ನಾವು ಇಂತಹ ಕೃತ್ಯದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಈ ರೀತಿಯ ಘಟನೆ ಮರುಕಳಿಸಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಪ್ರಭುರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಡಿಪಿಒ ಬಸವರಾಜು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ಸಂತೋಷ್, ಕೆಂಪೇಗೌಡ, ಸೋಸಲೆ ನಾಗೇಶ್, ಹೌಸಿಂಗ್ ನಾಗರಾಜು, ಸೋಮಣ್ಣ, ವೆಂಕಟಶೆಟ್ಟಿ, ಸೌಮ್ಯಾಲತಾ, ಕಾಂತಮ್ಮ, ಸುಶೀಲಾ, ರವಿ, ಲಿಂಗಣ್ಣ, ಕುಪ್ಯ ಪುಟ್ಟಸ್ವಾಮಿ, ಹೆಮ್ಮಿಗೆ ಪ್ರಶಾಂತ್, ರಾಜಣ್ಣ, ನಾಗರಾಜು ಸೇರಿದಂತೆ ಸರ್ಕಾರಿ ನೌಕರರ ಸಂಘದ ಸದಸ್ಯರು ಹಾಜರಿದ್ದರು.