ಹುಣಸೂರು: ಬೈಕ್ ನಲ್ಲಿ ಬಂದು ಬಸ್ ಅಡ್ಡಗಟ್ಟಿದ ಯುವಕರು ಚಾಲಕರ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕಿನ ಬೋಳನಹಳ್ಳಿಯಲ್ಲಿ ನಡೆದಿದೆ. ಘಟನೆಯ ಬಳಿಕ ಹಲ್ಲೆಕೋರರು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.
ಪಿರಿಯಾಪಟ್ಟಣ ಡಿಪೋದ ಬಸ್ ಚಾಲಕ ವೆಂಕಟೇಶ್ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಗೊಪಾಲಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಮೈಸೂರು ಕಡೆಯಿಂದ ಹಾಸನ ಕಡೆಗೆ ಪಿರಿಯಾಪಟ್ಟಣ ಘಟಕಕ್ಕೆ ಸೇರಿದ ಕೆಎಸ್ ಆರ್ ಟಿಸಿ ಬಸ್ ಹುಣಸೂರು ತಾಲೂಕು ಹೊಸ ರಾಮೇನಹಳ್ಳಿ ಬಳಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಹಸುಗಳು ಬಂದಿದ್ದರಿಂದ ಬಸ್ ನ್ನು ಚಾಲಕ ಸ್ವಲ್ಪ ಬಲಭಾಗಕ್ಕೆ ತಿರಿಗಿಸಿದ್ದರು. ಆ ವೇಳೆ ಕೆಆರ್ ನಗರ ಕಡೆಯಿಂದ ಮೈಸೂರು ಕಡೆಗೆ ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದ ಮೂರು ಜನ ಯುವಕರು ಬಸ್ ಚಾಲಕ ಢಿಕ್ಕಿ ಹೊಡೆಯಲು ಬಂದನೆಂದು ಬಸ್ಸನ್ನು ಅಡ್ಡಗಟ್ಟಿ ಚಾಲಕ-ನಿರ್ವಾಹಕರ ಜೊತೆ ಜಗಳ ಮಾಡಿದ್ದಾರೆ.
ಇದನ್ನೂ ಓದಿ:ಹುಣಸೋಡಿ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಯುವಕರ ಪೈಕಿ ಒರ್ವ ತನ್ನ ಬಳಿ ಇರಿಸಿಕೊಂಡಿದ್ದ ಚಾಕುವಿನಿಂದ ಚಾಲಕ ವೆಂಕಟೇಶ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಜನಸಂದಣಿ ಹೆಚ್ಚಾಗುತ್ತಿದ್ದಂತೆ ಅಲ್ಲಿಂದ ಮೂರು ಯುವಕರು ತಮ್ಮ ಬೈಕ್ ನಲ್ಲಿ ಮೈಸೂರು ಕಡೆಗೆ ಪರಾರಿಯಾಗಿದ್ದಾರೆ.
ಬಸ್ ನಿರ್ವಾಹಕ ಹರೀಶ್ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿವೈಎಸ್ ಪಿ ರವಿಪ್ರಸಾದ್ ತಿಳಿಸಿದ್ದಾರೆ.
ಚಾಲಕನಿಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.