Advertisement

ಸರ್ಕಾರದ ವಿರುದ್ಧ ಮುಗಿ ಬೀಳಲು ಸನ್ನದ್ಧ 

12:02 AM Feb 14, 2019 | Team Udayavani |

ಬೆಂಗಳೂರು: ಆಡಿಯೋ ಪ್ರಕರಣವನ್ನು ಎಸ್‌ಐಟಿಗೆ ಬದಲಾಗಿ ಸದನ ಸಮಿತಿ ಇಲ್ಲವೇ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಎರಡೂ ದಿನ ಪಟ್ಟು ಹಿಡಿದಿದ್ದ ಬಿಜೆಪಿ ಇದೀಗ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸದ ಮೇಲೆ ಜೆಡಿಎಸ್‌ ಕಾರ್ಯಕರ್ತರು ನಡೆಸಿದ ದಾಳಿಯನ್ನೇ ಕೇಂದ್ರವಾಗಿಸಿಕೊಂಡು ಸರ್ಕಾರದ ವಿರುದ್ಧ  ಮುಗಿಬೀಳಲು ಸಜ್ಜಾದಂತಿದೆ.

Advertisement

ವಿಧಾನಸಭೆಯಲ್ಲಿ ಬುಧವಾರ ಪ್ರಸ್ತಾಪ ವಾದ ಈ ವಿಚಾರ ಗದ್ದಲಕ್ಕೆ ಕಾರಣವಾಗಿ ಮುಂದೂಡಿಕೆಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಹಲವು ಶಾಸಕರೊಂದಿಗೆ ದಿಢೀರ್‌ ಹಾಸನಕ್ಕೆ ತೆರಳಿ ಕಾರ್ಯ ಕರ್ತರಿಗೆ ಧೈರ್ಯ ತುಂಬಲು ಮುಂದಾ ದರು. ಆ ಮೂಲಕ ಆಡಿಯೋ ಪ್ರಕರಣದ ಗುಂಗಿನಿಂದ ಹೊರಬಂದು ಬಿಜೆಪಿ ಶಾಸಕರ ನಿವಾಸದ ಮೇಲಿನ ದಾಳಿ ಘಟನೆಯನ್ನೇ ಪ್ರಮುಖ ವಿಚಾರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಂತೆ ಕಂಡುಬಂತು.

ಬುಧವಾರ ಮಧ್ಯಾಹ್ನ ಭೋಜನಾ ನಂತರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಪ್ರೀತಂ ಗೌಡ ನಿವಾಸದ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಇದು ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತು. ಬಿಜೆಪಿಯ ಆರ್‌. ಅಶೋಕ್‌, ಹಾಸನದಲ್ಲಿ ಶಾಸಕರ ನಿವಾಸದ ಮೇಲೆ ದಾಳಿ ನಡೆಸಿ ಗೂಂಡಾಗಿರಿ ತೋರಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಕಾಂಗ್ರೆಸ್‌,ಜೆಡಿಎಸ್‌ ಸ ದಸ್ಯರು ಆಕ್ಷೇಪಿಸಿದರು. ಬಿ.ಎಸ್‌.ಯಡಿಯೂರಪ್ಪ, ಪ್ರೀತಂ ಗೌಡ ಅವರ ನಿವಾಸಕ್ಕೆ ನುಗ್ಗಿದವರು ದಾಂಧಲೆ ನಡೆಸಿ ಶಾಸಕರ ತಾಯಿಯನ್ನು ಎಳೆದಾಡಿದ್ದಾರೆ. ಈ ಗೂಂಡಾಗಿರಿಯನ್ನು ಸರ್ಕಾರ ಒಪ್ಪುವುದೇ. ಈ ಕೃತ್ಯ ಎಷ್ಟು ಸರಿ? ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುಮ್ಮಕ್ಕಿನಿಂದಲೇ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದು, ಶಾಸಕರ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಪ್ರೇರಣೆಯಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದರು.

ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಬುಧವಾರ ಬೆಳಗ್ಗೆ 11.30ರ ಹೊತ್ತಿಗೆ ಜೆಡಿಎಸ್‌ ಕಾರ್ಯಕರ್ತರು ಹಾಗೂ ಕೆಲ ಗೂಂಡಾಗಳು ಒಟ್ಟಿಗೆ ಬಂದು ನಮ್ಮ ನಿವಾಸದ ಮುಂದೆ ಧರಣಿ ನಡೆಸುವ ನಾಟಕವಾಡಿದ್ದಾರೆ. ಬಳಿಕ ದಾಂಧಲೆ ನಡೆಸಿ ಮನೆಯಲ್ಲಿದ್ದ ತಂದೆ- ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.

Advertisement

ನಾನು ಯಾರ ಬಗ್ಗೆಯೂ ಮಾತನಾಡಿಲ್ಲ:ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ದಾಳಿ ನಡೆಸಿರುವುದು ಸರಿಯಲ್ಲ. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ನನ್ನ ಸ್ನೇಹಿತರು ಸೇರಿ ಯಾರನ್ನು ಕೇಳಿದರೂ ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆ ವಿಚಾರ ಕುರಿತಂತೆ ಇನ್ನೂ ಚರ್ಚೆ ನಡೆದಿರುವಾಗಲೇ ತಾವೇ ಒಂದು ನಿರ್ಧಾರಕ್ಕೆ ಬಂದು ಕಾನೂನು ಕೈಗೆತ್ತಿಕೊಂಡಿರುವುದು ಖಂಡನೀಯ. ಈ ಹಿಂದೆಯೂ ನನ್ನ ಕಾರನ್ನು ಸಂಪೂರ್ಣ ಜಖಂಗೊಳಿಸಲಾಗಿತ್ತು ಎಂದು ಹೇಳಿದರು.

ದಿಢೀರ್‌ ಹಾಸನಕ್ಕೆ ಯಡಿಯೂರಪ್ಪ: ಸದನ ಮುಂದೂಡಿಕೆಯಾಗುತ್ತಿದ್ದಂತೆ ವಿಧಾನಸಭೆಯ ಮೊಗಸಾಲೆಯಲ್ಲಿ ಚರ್ಚೆ ನಡೆಸಿದ ಯಡಿಯೂರಪ್ಪ ಕೂಡಲೇ ಶಾಸಕರೊಂದಿಗೆ ಹಾಸನಕ್ಕೆ ಹೋಗಲು ನಿರ್ಧರಿಸಿದರು. ತಕ್ಷಣ ಅಲ್ಲಿಂದ ಹೊರಟ ಯಡಿಯೂರಪ್ಪ ಅವರು ಮೊಗಸಾಲೆಯಲ್ಲಿ ಕುಳಿತಿದ್ದ ಇತರೆ ಬಿಜೆಪಿ ಶಾಸಕರನ್ನು ಹಾಸನಕ್ಕೆ ಬರುವಂತೆ ಸೂಚಿಸಿದರು. ಸ್ಥಳಕ್ಕೆ ತೆರಳಿ ಕಾರ್ಯಕರ್ತರಿಗೆ ಧೈರ್ಯ ತುಂಬುವ ಉದ್ದೇಶದಿಂದ ಯಡಿಯೂರಪ್ಪ ಹಾಸನದ ಕಡೆ ಹೊರಟರು.

ಕುಮಾರಸ್ವಾಮಿ- ರೇವಣ್ಣರಿಂದ ಸೂಚನೆ’
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವ ಎಚ್‌.ಡಿ.ರೇವಣ್ಣ ಅವರೇ ಸೂಚನೆ ನೀಡಿದ್ದಾರೆ
ಎಂಬುದಾಗಿ ಕಾರ್ಯಕರ್ತರು ಮಾತನಾಡಿರುವ ಮಾಹಿತಿ ಇದೆ. ನಾನು ಮತ್ತು ನನ್ನ ಕುಟುಂಬವನ್ನು
ಸರ್ವನಾಶಪಡಿಸುವಂತೆಯೂ ಸೂಚಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ ಎಂದು ಶಾಸಕ ಪ್ರೀತಂಗೌಡ ಹೇಳಿದರು. ನಾನು ಯಾವುದೇ ರೀತಿಯ ಪ್ರಚೋದನೆ ನೀಡಿಲ್ಲ. ಆದರೆ ನಾನು ಹಾಸನದಲ್ಲಿ ಗೆದ್ದಿರುವುದೇ ಕೆಲವರ ಆಕ್ರೋಶಕ್ಕೆ ಕಾರಣವಾಗಿರಬಹುದು. ಹಾಸನ ಸ್ಥಳೀಯ ಸಂಸ್ಥೆಯಲ್ಲಿ ಮೊದಲ ಬಾರಿಗೆ ಅತಂತ್ರ ಫ‌ಲಿತಾಂಶ ಬಂದಿದೆ. ಸಚಿವ ರೇವಣ್ಣ ಅವರು ನಾನು ಆಕಸ್ಮಿಕ ಶಾಸಕ ಎಂದು ಹೇಳಿದ್ದರು ಎಂದು ಸ್ಮರಿಸಿದರು.

ಮನವಿ ನೀಡುವೆ: ದಾಳಿ ಘಟನೆಗೆ ಸಂಬಂಧಪಟ್ಟಂತೆ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌
ಮಹಾನಿರ್ದೇಶಕರು ಹಾಗೂ ಸಭಾಧ್ಯಕ್ಷರಿಗೆ ಮನವಿ ನೀಡುತ್ತೇನೆ. ಶಾಸಕರ ನಿವಾಸದ ಮೇಲೆ ದಾಳಿ
ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ನಾನು ರಕ್ಷಣೆಗೆ
ಮನವಿ ಮಾಡುವುದಿಲ್ಲ. ಆದರೆ ದಾಂಧಲೆ ನಡೆಸಿದವರು ಪ್ರಾಣ ಬೆದರಿಕೆಯನ್ನು ಹಾಕಿದ್ದು, ಈ ಬಗ್ಗೆ
ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next