ಬೀದರ್: ನಗರದ ಕೋವಿಡ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರ ಗಂಟಲು ದ್ರವ ಮಾದರಿ ಪಡೆಯುವ ಸಂದರ್ಭದಲ್ಲಿ ಆ ವ್ಯಕ್ತಿಯ ಸಂಬಂಧಿಕರು ವಾರ್ಡ್‌ಗೆ ನುಗ್ಗಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟುಮಾಡಿದ ಆರೋಪ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರು ಮೈಕೈ ಬೇನೆ ಹಾಗೂ ಬೇದಿಯಿಂದಾಗಿ ಬೀದರನ ಕೋವಿಡ್19 ಆಸ್ಪತ್ರೆಗೆ ದಾಖಲಾಗಿದ್ದರು.
ಅವರಿಗೆ ಪ್ರಥಮ ಉಪಚಾರ ನೀಡಿ ಅವರ ಸ್ಯಾಂಪಲ್ ಪಡೆಯುವಾಗ ರೋಗಿಯ ಸಂಬಂದಿಕರಾದ ಬಾಬು, ಜ್ಯೋತಿ, ರಾಜಕುಮಾರ ಹಾಗೂ ಇತರರು ವಾರ್ಡ್‌ಗೆ ನುಗ್ಗಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಬೇಗ ವರದಿ ನೀಡಬೇಕೆಂದು ಲ್ಯಾಬ್ ಟೆಕ್ನಿಶಿಯನ್‌ಗಳಾದ ಅಮೀರ ಖಾನ್ ಹಾಗೂ ಸಂಜೀವ ಕುಮಾರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಬಳಿಕ ವೈದ್ಯಕೀಯ ಉಪಚಾರಕ್ಕೆ ವಿರುದ್ಧವಾಗಿ ಕೇಸ್ ಶೀಟ್ ಮೇಲೆ ಸಹಿ ಮಾಡಿ, ರೋಗಿಯನ್ನು ಸ್ಟ್ರೆಚರ್ ಮೇಲೆ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಈ ಕುರಿತು ಲ್ಯಾಬ್ ಟೆಕ್ನಿಶಿಯನ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ